ಪರೋಪಜೀವಿಜನ್ಯ ರೋಗಗಳು

	ವೈರಸ್, ರಿಕೆಟ್ಸಿಯಾ, ಏಕಾಣುಜೀವಿಗಳು, ಬೂಷ್ಟು (ಫಂಗಸ್), ನಾನಾಬಗೆಯ ಹುಳುಗಳು ಮುಂತಾದ ಪರೋಪಜೀವಿಗಳಿಂದ (ಪ್ಯಾರಸೈಟ್ಸ್) ಉಂಟಾಗುವ ರೋಗಗಳ ವ್ಯಾಪಕ ಹೆಸರು. ಪ್ರಚಲಿತ ಮಾನ್ಯತೆ ಪ್ರಕಾರ ಪ್ರಾಣಿವರ್ಗದ ಪರೋಪಜೀವಿಗಳ ದೆಸೆಯಿಂದ ತಗಲುವ ರೋಗಗಳಿಗೆ ಮಾತ್ರ ಈ ಹೆಸರಿದೆ. ಎಂದೇ ಬೂಷ್ಟಿನಿಂದ ಬರುವ ರೋಗಗಳನ್ನು ಈ ಗುಂಪಿಗೆ ಸೇರಿಸುವುದಿಲ್ಲ.

	ಎರಡು ಅಥವಾ ಅನೇಕ ಜೀವಿಗಳು ಒಂದನ್ನೊಂದು ಆಶ್ರಯಿಸಿ ಬದುಕುವ ರೀತಿಯನ್ನು, ಅಂದರೆ ಇವೆರಡರ ನಡುವಿನ ಸಂಬಂಧವನ್ನು, ನಾಲ್ಕು ವಿಧಗಳಿಂದ ವಿಂಗಡಿಸಬಹುದು :
	1 ಅನ್ಯೋನ್ಯಾಶ್ರಯ (ಮ್ಯೂಚುವಾಲಿಸಮ್) : ಪರಸ್ಪರ ಎರಡು ಜೀವಿಗಳು ಲಾಭ ಪಡೆಯುತ್ತವೆ.
	2 ಸಹಜೀವನ (ಸಿಂಬಾಯಾಸಿಸ್) : ಒಂದನ್ನು ಬಿಟ್ಟು ಇನ್ನೊಂದು ಬಾಳಲಾರದು 
	3 ಸಹಭುಂಜನ (ಕಮ್ಮೆನ್ಸಲಸಮ್) : ಅತಿಥೇಯ ಜೀವಿಗೆ ಹಾನಿಮಾಡುವ ಪರೊಪಜೀವಿ ಅದರಿಂದ ಲಾಭಪಡೆಯುತ್ತದೆ.
	4 ಪರೋಪಜೀವನ (ಪ್ಯಾರಸೈಟಿಸಮ್) : ಅತಿಥೇಯ ಜೀವಿಗೆ ಹಾನಿಮಾಡಿ ಪರೋಪಜೀವಿ ಲಾಭಪಡೆಯುತ್ತದೆ.

	ಈ ನಾಲ್ಕನೆಯ ವರ್ಗದ ಅನೇಕ ಜೀವಿಗಳಿಂದ ಅತಿಥೇಯ ಜೀವಿಗಳಿಗೆ ರೋಗಗಳು ತಾಗುತ್ತವೆ. ಇವೇ ಪರೋಪಜೀವಿಜನ್ಯ ರೋಗಗಳು.

	ಪರೋಪಜೀವಿಗಳಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ. 1 ಬಾಹ್ಯಪರೋಪಜೀವಿ ಆತಿಥೇಯ ಜೀವಿಯ ಮೈಮೇಲೆ ಅಥವಾ ಚರ್ಮದಲ್ಲಿ ಇರುವುದು. ಉದಾಹರಣೆಗೆ ಕಜ್ಜಿ ಉಂಟುಮಾಡುವ ಜೀವಿ.

	2 ಆಂತರಿಕ ಪರೋಪಜೀವಿ : ಅತಿಥೇಯ ಜೀವಿಯ ದೇಹದ ಒಳಗಡೆ ಅಂದರೆ ರಕ್ತ, ಊತಕ, ಜೀರ್ಣಾಂಗವ್ಯೂಹ, ಪಿತ್ತಕೋಶ, ಶ್ವಾಸಕೋಶ, ಮೂತ್ರ ಕೋಶ ಅಥವಾ ಇನ್ನಿತರ ಅಂಗಾಂಗಗಳಲ್ಲಿ ಜೀವಿಸುತ್ತದೆ.

	ಪರೋಪಜೀವಿಗಳು ಸಹಜೀವಿಗಳಾಗಿದ್ದು ಅತಿಥೇಯ ಜೀವಿಯಲ್ಲಿ ಹೆಚ್ಚಾಗಿರುವ ದ್ರವ ಮತ್ತು ಗಟ್ಟಿ ಪದಾರ್ಥಗಳನ್ನು ತಿಂದು ಜೀವಿಸುತ್ತ ಅವುಗಳಿಗೆ ಹಾನಿಉಂಟುಮಾಡದಂತಿರಬಹುದು ಇಲ್ಲವೇ ರೋಗಕಾರಕ ಪರೋಪಜೀವಿಗಳಾಗಿದ್ದು ಅದಕ್ಕೆ ಹಾನಿ ಉಂಟುಮಾಡಿ ಜೀವಿಸುವಂತಿರಬಹುದು. ಶಾಶ್ವತ ಪರೋಪಜೀವಿಯಾಗಿದೆ. ಇರಬೇಕಾದ ಸನ್ನಿವೇಶ ಒದಗಿದಾಗ ಪರೋಪಜೀವನಕ್ಕೆ ಹೊಂದಿಕೊಳ್ಳುವ ಪ್ರಾಣಿಗೆ ಐಚ್ಛಿಕ ಪರೋಪಜೀವಿ ಎಂದು ಹೆಸರು. ತನ್ನ ಬದುಕು ಇಡೀ ಅಥವಾ ಅದರ ಒಂದು ಭಾಗ ಅತಿಥೇಯ ಜೀವಿಯ ಆಸರೆಯಲ್ಲಿ ಕಳೆಯಬೇಕಾದ ಅಗತ್ಯವಿರುವ ಪ್ರಾಣಿಗೆ ಹಂಗಿನ ಪರೋಪಜೀವಿ (ಆಬ್ಲಿಗೇಟರಿ ಪ್ಯಾರಾಸೈಟ್) ಎಂದು ಹೆಸರು. ಆಕಸ್ಮತ್ತಾಗಿ ಅತಿಥೇಯ ಜೀವಿಯ ಆಸರೆ ಪಡೆದು ವೃದ್ಧಿಹೊಂದುವ ಪ್ರಾಣಿಪ್ರಾಸಂಗಿಕ ಪರೋಪಜೀವಿ (ಇನ್ಸಿಡೆಂಟಲ್ ಪ್ಯಾರಸೈಟ್) ಎಂದು ಹೆಸರು. ಪರೋಪಜೀವಿಗಳು ಅವಲಂಬಿಸುವ ಅತಿಥೇಯಗಳಲ್ಲಿ ಮೂರು ಬಗೆಗಳನ್ನು ಗಮನಿಸಬಹುದು ಪರೋಪಜೀವಿಯ ಹರೆಯ ಮತ್ತು ಲೈಗಿಂಕ ಜೀವನವನ್ನು ಧರಿಸುವ ಅತಿಥೇಯ ನಿಯತಾಥೇಯ. ವ್ಯಕ್ತಿಯಲ್ಲಿ ರೋಗವನ್ನು ಉಂಟುಮಾಡುವ ಬಹಳ ಪರೋಪಜೀವಿಗಳಿಗೆ ಆತನೇ ನಿಯತಾಥಿತೇಯ. ಪರೋಪಜೀವಿಯ ಭ್ರೂಣಾವ್ಯವಸ್ಥೆಯ ಸ್ವಲ್ಪ ಭಾಗವನ್ನು ಕಳೆಯುವ ಅತಿಥೇಯಕ್ಕೆ ಮಧ್ಯವರ್ತಿ (ಇಂಟರ್‍ಮಿಡಿಯೆಟ್) ಅತಿಥೇಯ ಎಂದು ಹೆಸರು. ಕೆಲವು ಸಲ ಪರೋಪಜೀವಿಯ ಈ ಹಂತದ ಬೆಳೆವಣೆಗೆಗೆ ಎರಡು ಮಧ್ಯವರ್ತಿ ಅತಿಥೇಯಗಳು ಅಗತ್ಯವಾಗುತ್ತವೆ. ಇವುಗಳಿಗೆ ಮೊದಲನೆಯ ಮತ್ತು ಎರಡನೆಯ ಮಧ್ಯವರ್ತಿ ಅತಿಥೇಯಗಳೆಂದು ಹೆಸರು. ಈ ಮಧ್ಯವರ್ತಿಗಳಲ್ಲಿ ಪರೋಪಜೀವಿಗಳ ಬೆಳವಣಿಗೆ ಮಾತ್ರ ಕಂಡು ಬರುತ್ತದೆ. ಅವುಗಳ ಲೈಂಗಿಕ ಚಟುವಟಿಕೆ ಇನ್ನೂ ಪ್ರಾರಂಭವಾಗಿರುವುದಿಲ್ಲ. ಪರೋಪಜೀವಿಗೆ ಆಶ್ರಯ ಕೊಟ್ಟಿದ್ದರಿಂದ ಸ್ವತಃ ಬಾಧಿತವಾಗದೆ ಬೇರೆ ಪ್ರಾಣಿಗಳಿಗೆ ಸೋಂಕು ಹರಡುವುದಕ್ಕೆ ಕಾರಣವಾಗುವ ಪ್ರಾಣಿಗೆ ಆಶ್ರಯಾತಿಥೇಯ (ರಿಸರ್ವಾಯಿರ್ ಹೋಸ್ಟ್) ಎಂದು ಹೆಸರು.

	ರೋಗಕಾರಕ ಪರೋಪಜೀವಿಗಳು ಆತಿಥೇಯಗಳ ದೇಹವನ್ನು ಹೊಕ್ಕ ಮಾತ್ರದಿಂದಲೇ ರೋಗವನ್ನು ಉಂಟುಮಾಡಿಯೇಮಾಡುತ್ತವೆಂದು ಹೇಳುವ ಹಾಗಿಲ್ಲ. ರೋಗಕಾರಕತೆ ಪರೋಪಜೀವಿಯ ಪ್ರಾಬಲ್ಯ ಪ್ರಮಾಣ ಮತ್ತು ಭಾವೀರೋಗಿಯ ರೋಗಾರ್ಹತೆ ಇವನ್ನು ಅವಲಂಬಿಸಿದೆ. ಒಬ್ಬ ವ್ಯಕ್ತಿಯಲ್ಲಿ ಒಂದು ಪರೋಪಜೀವಿಯಾವ ರೋಗಲಕ್ಷಣವನ್ನೂ ಉಂಟುಮಾಡದಿರಬಹುದು. ಆದರೆ ಅದೇ ಜೀವಿ ಬೇರೊಬ್ಬ ವ್ಯಕ್ತಿಯಲ್ಲಿ ತೀವ್ರ ರೋಗಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಪರೋಪಜೀವಿಗಳು ವರ್ಣ ಅಥವಾ ವಯಸ್ಸಿನ ಭೇದವನ್ನು ನೋಡುವುದಿಲ್ಲ. ಆದರೆ ಇದಕ್ಕೆ ಕೆಲವು ಅಪವಾದಗಳಿವೆ. ಯಾವ ಭೌಗೋಳಿಕ ಭಾಗದಲ್ಲಿ ಪರೋಪಜೀವಿ ವಿಶೇಷವಾಗಿರುತ್ತದಯೋ ಅಲ್ಲಿಯ ಜನ ಅವುಗಳಿಗೆ ಹೊಂದಿಕೊಂಡಿರುತ್ತಾರೆ. ಆದರೆ ಅಲ್ಲಿಗೆ ಬರುವ ಹೊಸಬರನ್ನು ಅವು ಕಾಡುತ್ತವೆ. ನೀಗ್ರೋಗಳಲ್ಲಿ ಪ್ಲಾಸ್ಮೋಡಿಯಮ್ ವೈವಾಕ್ಸಿನಿಂದ ತಲೆದೋರುವ ಮಲೇರಿಯ ರೋಗ ಕಡಿಮೆ. ಆದರೆ ಕಾಕೇಶಿಯನ್ನರಲ್ಲಿ ಅದೇ ಪ್ಲಾಸ್ಮೋಡಿಯಮ್ ತೀವ್ರ ರೋಗಕಾರಕ. ಕೆಲವು ಪರೋಪಜೀವಿಗಳು ಮಕ್ಕಳನ್ನು ಮಾತ್ರ ಭಾದಿಸುತ್ತವೆ.

	ಪರೋಪಜೀವಿಗಳಿಂದ ಉಂಟಾಗುವ ಹಾನಿಗಳು : ಪರೋಪಜೀವಿಗಳು ತಮ್ಮ ಆತಿಥೇಯಗಳಲ್ಲಿ ಉಂಟುಮಾಡುವ ಹಾನಿಗಳು ಬಗೆ ಬಗೆಯವು.

	ಗಾಸಿಯಿಂದ ಉಂಟಾಗುವ ಹಾನಿ : ಕೆಲವು ಪರೋಪಜೀವಿಗಳು ತಮ್ಮ ಅತಿಥೇಯಗಳ ಕೋಶಗಳನ್ನು ಮತ್ತು ಊತಕಗಳನ್ನು ಅವುಗಳ ಸ್ವಾಭಾವಿಕ ನೆಲೆಗಳಿಂದ ಬೇರ್ಪಡಿಸಿ ನಾಶಮಾಡುತ್ತವೆ. ಉದಾಹರಣೆಗೆ ಲಾಡಿಹುಳು, ಕೊಕ್ಕೆ ಹುಳು, ಇವು ಸಣ್ಣ ಕರುಳಿನ ಲೋಳೆಪೊರೆಗೆ ಈ ರೀತಿ ಗಾಸಿ ಮಾಡುತ್ತವೆ. ಪರೋಪಜೀವಿಯ ಮೊಟ್ಟೆಗಳಿಂದಲೂ ಭ್ರೂಣಾವಸ್ಥೆ ಅಥವಾ ಬಲಿತ ಸ್ಥಿತಿಯಲ್ಲಿ ಈ ಜೀವಿಗಳು ಊತಕಗಳಲ್ಲಿ ಸಂಚರಿಸುವುದರಿಂದಲೂ ಸಪೂರ ಅಥವಾ ತೋರ ಗಾಯಗಳಾಗಬಹುದು.

	ಜೀರ್ಣವಾಗುವಿಕೆಯಿಂದ ಆಗುವ ಹಾನಿ : ಪರೋಪಜೀವಿಗಳು ಸ್ರವಿಸುವ ಕಿಣ್ವದಿಂದ ಅತಿಥೇಯ ಕೋಶಗಳು ಮತ್ತು ಊತಕಗಳು ಜೀರ್ಣವಾಗಬಹುದು. ಎಂಟಮೀಬ ಹಿಸ್ಟೊಲಿಟಿಕದ ಎಂಬ ಏಕಕೋಶದಿಂದ ಕರುಳಿನಲ್ಲಿ ಈ ತರಹದ ಹಾನಿ ಆಗಬಹುದು. ರಕ್ತದ ಚಪ್ಪಟಕ್ರಿಮಿ ಚರ್ಮದಿಂದ ಚರ್ಮದ ರಕ್ತನಾಳಗಳಿಗೆ ಹೋಗುವಾಗಿ ಈ ತರಹದ ಹಾನಿ ಸಾಧ್ಯ.

	ಅಡಚಣೆಯಿಂದ ಆಗುವ ಹಾನಿ : ಜಂತು ಹುಳುಗಳ ಗುಂಪಿನಿಂದಾಗಲಿ ಸುತ್ತು ಗಟ್ಟಿದ ಲಾಡಿ ಹುಳುವಿನಿಂದಾಗಲಿ ಕರುಳಿನಲ್ಲಿ ಅಡಚಣೆ ತಲೆದೊರಬಹುದು. ಕೆಲವು ಪರೋಪಜೀವಿಗಳು ಮೂತ್ರನಾಳ ಮತ್ತು ಸಣ್ಣ ಶ್ವಾಸನಾಳಗಳಲ್ಲಿ ಅಡಚಣೆ ಮಾಡಬಹುದು.

	ಆಹಾರವಸ್ತುಗಳ ಹಾನಿ : ಬಹುತೇಕ ಪರೋಪಜೀವಿಗಳು ವ್ಯಕ್ತಿಯ ದೇಹದಲ್ಲಿ ವಾಸಿಸುತ್ತ ಅವನು ತಿಂದ ಮತ್ತು ಅರ್ಧ ಜೀರ್ಣವಾದ ತಿನಿಸನ್ನು ತಿನ್ನುತ್ತವೆ ಮತ್ತು ಊತಕಗಳಿಂದ ಪೋಷಕಗಳನ್ನು ಹೀರುತ್ತವೆ. ಕೊಕ್ಕೆಹುಳು ಕರುಳಿನಲ್ಲಿ ವಾಸಿಸುತ್ತ ಕರುಳಿನಲ್ಲಿ ರಕ್ತನಾಳಗಳಿಂದ ರಕ್ತವನ್ನು ಹೀರಿ ಜೀವಿಸುತ್ತದೆ. ಇದರಿಂದ ವ್ಯಕ್ತಿಗೆ ರಕ್ತಹೀನತೆ ಉಂಟಾಗುತ್ತದೆ ಲಾಡಿಹುಳುಗಳು ವ್ಯಕ್ತಿ ತಿಂದ ತಿನಿಸನ್ನು ಬಳಸಿಕೊಂಡು ಅವನಲ್ಲಿ ಆಹಾರದ ಕೊರತೆಗೆ ಕಾರಣವಾಗುತ್ತವೆ.

	ವಿಷವೇರಿಕೆಯಿಂದ ಹಾನಿ : ಪರೋಪಜೀವಿಗಳ ಕಾಯದ ಪ್ರೋಟೀನ್ ಮತ್ತು ಇತರ ಬಾಹ್ಯವಸ್ತುಗಳಿಂದ ಅತಥೇಯಗಳಿಂದ ಒಗ್ಗದಿಕೆ (ಆಲರ್ಜಿ) ಕಂಡುಬರಬಹುದು. ಉದಾಹರಣೆಗೆ ಕೊಕ್ಕೆ ಹುಳುವಿನ ಮರಿಯ ಸೋಂಕಿನಿಂದಾಗುವ ಮಣ್ಣುಳ (ಕ್ರೀಪಿಂಗ್ ಇರಪ್ಪನ್) ರೋಗ, ಆನೆಕಾಲುಕಾರಕ ಫೈಲೇರಿಯ ಕ್ರಿಮಿ, ನಾರುಹುಣ್ಣುಕಾರಕ ಹುಳು ಮತ್ತು ಜಂತುಹುಳುವಿನ ಭ್ರೂಣಗಳಿಂದಾಗುವ ಇಯೊಸಿನೊಫಿಲಿಯ ಹಾಗೂ ದಮ್ಮು ಇತ್ಯಾದಿ. ಮುಖದ ಬಾವು, ವಾಂತಿ ಭೇದಿ, ಮೇಲುಸಿರು, ದದ್ದು, ಸೊಕ್ಕೆ (ಷಾಕ್) ಇವು ಕೂಡ ಕೆಲವು ವೇಳೆ ಉಂಟಾಗಬಹುದು. ನೀರ್ಬೋಡ್ಡೆಗೆ (ಹೈಡಟಿಡ್) ಆಘಾತವಾಗಿ ಅದು ಒಡೆದು ಅದರ ದ್ರವ ದೇಹವನ್ನು ಸೇರಿದಾಗ (ಅನಫೈಲಾಕ್ಸಿಸ್) ಉಂಟಾಗಬಹುದು.

	ವೆಗ್ಗಳಿಕೆಯಿಂದ ಆಗುವ ಹಾನಿ : ಆನೆಕಾಲು ಮತ್ತು ಶಿಷ್ಟೋ ಸೋಮ ರೋಗಗಳಲ್ಲಿ ಅತಿಥೇಯದ ಊತಕಗಳ ಟಿಶ್ಯೂಸ್ ವೆಗ್ಗಳಿಕೆಯುಂಟಾಗಿ (ಪ್ರೊಲಿಫರೇಷನ್) ಅಂಗಾಂಗಗಳ ಮತ್ತು ಊತಕಗಳ ಸ್ವಾಭಾವಿಕವಾದ ಕಾರ್ಯಕ್ಕೆ ಅಡಚಣೆ ಉಂಟಾಗುತ್ತದೆ.

	ಈ ಮೇಲೆ ಹೇಳಿದ ಹಾನಿಗಳ ಜೊತೆಗೆ ಪರೋಪಜೀವಿಯಿಂದಾಗುವ ಹಾನಿಯ ಪರಿಣಾಮವಾಗಿ ಏಕಾಣುಜೀವಿಗಳು ಮತ್ತು ಇತರ ರೋಗಕಾರಕಗಳು ಅತಿಥೇಯದ ದೇಹವನ್ನು ಪ್ರವೇಶಿಸಲು ಅನುಕೂಲವಾಗಿ ಪರೋಪಜೀವಿಜನ್ಯರೋಗದ ಜೊತೆ ಮತ್ತೊಂದು ರೋಗವೂ ಉಂಟಾಗಬಹುದು.

	ಸೋಂಕಿನ ಮೂಲ ಮತ್ತು ಸೋಂಕು ಹತ್ತುವ ದಾರಿ : ರೋಗಕಾರಕ ಪರೋಪ ಜೀವಿ ವ್ಯಕ್ತಿಯ ಶರೀರವನ್ನು ಅನೇಕ ರೀತಿಗಳಲ್ಲಿ ಪ್ರವೇಶಿಸಬಹುದು.

(ಚಿ) ಎಂಟಮೀಬದ ಬೀಜಾಣುಗಳು (ಸಿಸ್ಟ್ಸ್) : ಜಂತುಹುಳುವಿನ ಮೊಟ್ಟೆಗಳು, ನಾರುಹುಣ್ಣು ಹುಳುವಿನ ಮಧ್ಯವರ್ತಿ ಅತಿಥೇಯ ಸೈಕಾಪ್ಲ್ ಇವು ಕುಡಿಯುವ ನೀರಿನ ಮೂಲಕ ಅಥವಾ ತಿನ್ನುವ ತಿನಿಸಿನ ಮೂಲಕ ದೇಹವನ್ನು ಪ್ರವೇಶಿಸಬಹುದು.

(b) ಸೋಂಕಿನ ಪರೋಪಜೀವಿಗಳು ಮಧ್ಯವರ್ತಿ ಅತಿಥೇಯಗಳ ಮಾಂಸಖಂಡದಲ್ಲಿದ್ದು ಆ ಮಾಂಸವನ್ನು ವ್ಯಕ್ತಿ ತನ್ನ ಆಹಾರವಾಗಿ ಬಳಸಿದಾಗ ಸೋಂಕು ಹತ್ತಬಹುದು.

(ಛಿ) ಚರ್ಮದ ಮೂಲಕ ಅಥವಾ ಲೋಳೆಪೊರೆಯ ಮೂಲಕ ಪರೋಪಜೀವಿ ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು. ಉದಾಹರಣೆಗೆ ಕೊಕ್ಕೆಹುಳುವಿನ ಕೀಟಕಗಳು ಹಸಿ ಮಣ್ಣಿನಲ್ಲಿದ್ದು ವ್ಯಕ್ತಿ ಬರಿ ಕಾಲಿನಲ್ಲಿ ನಡೆದಾಗ ಚರ್ಮದ ಮೂಲಕ ಆತ ಶರೀರವನ್ನು ಪ್ರವೇಶಿಸಬಹುದು. ಶಿಷ್ಟೋಸೋಮ ಸೋಂಕನ್ನು ಉಂಟು ಮಾಡುವ ಲೇಪಗಳು ನೀರಿನಲ್ಲಿದ್ದು ಚರ್ಮದ ಮೂಲಕ ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು.

(ಜ) ಸೋಂಕು ಹತ್ತಿದ ಅತಿಥೇಯರಿಂದ ಇನ್ನೊಂದು ಅತಿಥೇಯಕ್ಕೆ ಸೋಂಕು ಹತ್ತಬಹುದು. ವ್ಯಕ್ತಿಯನ್ನು ಜೀವಿ ಕಚ್ಚಿ ಆತನ ನೆತ್ತರನ್ನು ಹೀರುವಾಗ ಸೋಂಕು ಹತ್ತಿದ ಸಂಧಿಪದಿ ಪರೋಪಜೀವಿಗಳನ್ನು ಅದು ನೇರವಾಗಿ ರಕ್ತಕ್ಕೆ ಇಲ್ಲವೇ ಚರ್ಮದ ಪದರಗಳಿಗೆ ಬಿಡಬಹುದು. ಉದಾಹರಣೆಗೆ ಪ್ಲಾಸ್‍ಮೋಡಿಯಮ್ (ಮಲೇರಿಯಕಾರಕ) ಅನಾಫಿಲೇಸ್ ಸೊಳ್ಳೆಗಳಿಂದಲೂ ನಿದ್ರಾರೋಗಕಾರಕ ಟ್ರಿಪಾನೋಸೋಮ ಗ್ಲಾಸೈನಾ ಎಂಬ ಟ್ಸೆಟ್ಸೆ ನೊಣಗಳಿಂದಲೂ ಕಾಳಿಮಾರಿ ಜ್ವರ (ಕಾಲಾ ಆಸಾರ್) ಮರಳು ನೊಣಗಳಿಂದಲೂ ಹರಡಬಹುದು.

ಪ್ರಯೋಗಶಾಲೆಯಲ್ಲಿ ರೋಗನಿಧಾನ : ರಕ್ತದ ಸವರಿನ ಪರೀಕ್ಷೆ (ಬ್ಲಡ್ ಫಿಲ್ಮ್) ಮಲೇರಿಯ, ಕಾಳಿಮಾರಿಜ್ವರ, ನಿದ್ರರೋಗ ಇವನ್ನು ಈ ಪರೀಕ್ಷೆಯಿಂದ ಪತ್ತೆಮಾಡಬಹುದು. ಮಲೇರಿಯದಲ್ಲಿ ಪರೋಪಜೀವಿಗಳು ಕೆಂಪು ರಕ್ತಕಣಗಳಲ್ಲಿರುತ್ತವೆ. ಕಾಳಿಮಾರಿಜ್ವರದಲ್ಲಿ ಮಾನೊಸೈಟ್ ಎಂಬ ಬಿಳಿಯ ರಕ್ತಕಣಗಳಲ್ಲಿ ಲೀಷ್ಮನ್‍ಡೋನೋವನ್ ರೂಪಗಳಿರುತ್ತವೆ. ನಿದ್ರಾ ರೋಗದಲ್ಲಾದರೂ ಟ್ರಿಪನೊಸೋಮಗಳು ರಕ್ತರಸದಲ್ಲಿರುತ್ತವೆ. ಸೂಕ್ಷ್ಮದರ್ಶಕ ಪರೀಕ್ಷೆ ಮಾಡಿದಾಗ ಮಲದಲ್ಲಿ ಪರೋಪಜೀವಿಯ ಮೊಟ್ಟೆಗಳೂ ಮರಿಗಳೂ ಅಗಾಧ ಪ್ರಮಾಣದಲ್ಲಿ ಕಾಣಬರುತ್ತವೆ. ಕೆಲವು
ವೇಳೆ ಬೆಳೆದ ಪರೋಪಜೀವಿಗಳು ಅಥವಾ ಅವುಗಳ ಭಾಗಗಳು ಬರಿ ಕಣ್ಣಿಗೇ ಗೋಚರಿಸುವಂತೆ ಮಲದಲ್ಲಿ ಇರುತ್ತವೆ.

	ಮೂತ್ರಪರೀಕ್ಷೆ : ಶಿಷ್ಟೋಸೋಮ ಸೋಂಕಿನಲ್ಲಿ ಅದರ ಮೊಟ್ಟೆಗಳು ಮೂತ್ರದಲ್ಲಿ ಕಾಣಿಸಬಹುದು. ಉಷರೀರಿಯ ಬ್ಯಾನ್‍ಕ್ರಾಫ್ಟಿಯಿಂದ ಉಂಟಾಗುವ ದುಗ್ಧರಸಮೂತ್ರರೋಗದಲ್ಲಿ (ಕೈಲ್ಯೂರಿಯ) ಅಸಂಖ್ಯಾತ ಮತ್ತು ಅತಿಸೂಕ್ಷ್ಮಕ್ರಿಮಿಗಳಾಗಿ ಮೂತ್ರದಲ್ಲಿ ಕಾಣಬರಬಹುದು.

ಕಫ ಪರೀಕ್ಷೆ ; ಕಫ ಪರೀಕ್ಷೆ ಈ ಮುಂದಿನ ಸಂದರ್ಭಗಳಲ್ಲಿ ಕಾಯಿಲೆಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ :
(ಚಿ) ಪರೋಪಜೀವಿಯ ವಾಸಸ್ಥಾನ ಉಸಿರಾಟದ ದಾರಿಯೇ ಆಗಿದ್ದರೆ (ಉದಾಹರಣೆಗೆ ಪ್ಯಾರಗೋನಿಮಿಯಾಸಿಸ್ ರೋಗದಲ್ಲಿ) ಪ್ಯಾ ವೆಸ್ಟರ್‍ಮಾನಿ ಮೊಟ್ಟೆಗಳು ಕಫದಲ್ಲಿ ಕಾಣಬರಬಹುದು.
(b) ಶ್ವಾಸಕೋಶದಲ್ಲಿ ಅಮೀಬದ ಕುರು ಆದಾಗ ಅದರ ಪಾಲಜೀಕಣಗಳು (ಟ್ರೋಪೋಸೈಟ್) ಕಫದಲ್ಲಿ ಕಾಣಿಸಿಕೊಳ್ಳಬಹುದು.
(ಛಿ) ಹೈಡ್ಯಾಟಿಡ್ ಕೋಶ ಒಡೆದಾಗ ಎಕೈನೊಕಾಕಸ್ ಗ್ರಾನ್ಯುಲೋಸಸ್ ಎಂಬ ಲಾಡಿಹುಳುವಿನ ಕೊಕ್ಕೆ ಕೊಂಡಿಗಳು ಕಫದಲ್ಲಿ ಕಾಣಬರಬಹುದು.
ಜೀವುಂಡಿಗೆ ಪರೀಕ್ಷೆ : ಜೀವುಂಡಿಗೆ ಪರೀಕ್ಷೆಯ ಮೂಲಕ ಕೆಲವು ಪರೋಪಜೀವಿಜನ್ಯ ರೋಗಗಳನ್ನು ಪತ್ತೆಹಚ್ಚಬಹುದು. 
(ಚಿ) ಗುಲ್ಮದ ಜೀವುಂಡಿಗೆ ಪರೀಕ್ಷೆ ಕಾಳಿಮಾರಿ ಜ್ವರವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
(b) ಕಾಳಿಮಾರಿ ಜ್ವರ ಮತ್ತು ನಿದ್ರಾರೋಗಗಳನ್ನು ಪತ್ತೆಮಾಡಲು ಎದೆ ಎಲುಬಿನ ಜೀವುಂಡಿಗೆ ಪರೀಕ್ಷೆ ಸಹಾಯಮಾಡುತ್ತದೆ.
(ಛಿ) ಕಾಳಿಮಾರಿ ಜ್ವರ, ಮೂಡಲಹುಣ್ಣು (ಓರಿಯಂಟಲ್ ಸೋರ್) ಎಸ್ಮಾಂಡಿಯಾ ಮತ್ತು ಅಂಕೊಸರ್ಕಿಯಾಸಿಸ್ ರೋಗಗಳನ್ನು ಕಂಡುಹಿಡಿಯಲು ಚರ್ಮದ ಜೀವುಂಡಿಗೆ ಪರೀಕ್ಷೆ ಸಹಾಯಮಾಡುತ್ತದೆ.
(ಜ) ನಿದ್ರಾರೋಗ, ಫೈಲೇರಿಯಾ ಮತ್ತು ಕಾಳಿಮಾರಿ ರೋಗಗಳ ಪತ್ತೆಯಲ್ಲಿ ದುಗ್ದರಸ ಗ್ರಂಥಿಗಳ ಜೀವುಂಡಿಗೆ ಪರೀಕ್ಷೆ ಸಹಾಯವಾಗುತ್ತದೆ.
(e) ಸಿಸ್ಟರ್ ಕೋಸಿಸ್ ಮತ್ತು ಟ್ರೈಕಿನೆಲ್ಲಾ ಕಾಯಿಲೆಗಳಲ್ಲಿ ಮಾಂಸಖಂಡದ ಜೀವುಂಡಿಗೆ ಪರೀಕ್ಷೆ ಸಹಾಯ ಮಾಡುತ್ತದೆ.
(ಜಿ) ಶಿಷ್ಟೋಸೋಮಿಯ ಸೋಂಕನ್ನು ಪತ್ತೆಹಚ್ಚಲು ಯಕೃತ್ತಿನ ಜೀವುಂಡಿಗೆ ಪರೀಕ್ಷೆ ಮತ್ತು ನೆಟ್ಟಗರುಳಿನ ಜೀವುಂಡಿಗೆ ಪರೀಕ್ಷೆ ಸಹಾಯವಾಗುತ್ತವೆ.

ಇತರ ನಿದಾನ ವಿಧಾಗಗಳು : (ಚಿ) ಪರೋಪಜೀವಿಜನ್ಯ ರೋಗಗಳಲ್ಲಿ ರಕ್ತದಲ್ಲಿರುವ ಜೀವಕಣಗಳು ಮಾರ್ಪಾಡು ಹೊಂದಬಹುದು. ಹುಳುಗಳ ಸೋಂಕು ಹತ್ತಿದಾಗ ಇಯೊಸಿನೊಫಿಲ್ಲುಗಳು ಜಾಸ್ತಿಯಾಗಬಹುದು. ಅಮೀಬ ಕುರುವನಿ ಕಾಯಿಲೆಯಲ್ಲಿ ಬಿಳಿಯ ರಕ್ತಕಣಗಳು ಜಾಸ್ತಿಯಾಗಬಹುದು. ಮಲೇರಿಯ ಮತ್ತು ಕೊಕ್ಕೆಹುಳುಗಳು ಕಾಯಿಲೆಯಲ್ಲಿ ಕೆಂಪುರಕ್ತಕಣಗಳು ಕಮ್ಮಿ ಆಗಬಹುದು. 
(ಚಿ) ಕೆಲವು ಸಂದರ್ಭಗಳಲ್ಲಿ ಜೀವರಾಸಾಯನಿಕ ಬದಲಾವಣೆಗಳಾಗಬಹುದು. 
(b) ರಸಿಕೆಯ ಪರೀಕ್ಷೆಯಿಂದಲೂ ಕೆಲವು ಪರೋಗಜೀವಿಜನ್ಯ ರೋಗಗಳನ್ನು ಪತ್ತಹಚ್ಚಬಹುದು. ಚರ್ಮಕ್ಕೆ ಚುಚ್ಚುಮದ್ದನ್ನು ಇಳಿಸಿ ಅದರಿಂದಾಗುವ ಪರಿಣಾಮದಿಂದ ಕಾಯಿಲೆಯನ್ನು ಕಂಡುಹಿಡಿಯಬಹುದು. ಉದಾಹರಣೆಗೆ ಹೈಡ್ಯಾಟಿಡ್ ಕಾಯಿಲೆಯನ್ನು ಕ್ಯಾಸೋನಿ ಪರೀಕ್ಷೆಯಿಂದ ಪತ್ತೆಹಚ್ಚಬಹುದು.

ಏಕಕೋಶಿಕ ಪರೋಪಜೀವಿ (ಪ್ರೋಟೊಜೋóವಾ) : ಈ ಗುಂಪಿನಲ್ಲಿ ಎರಡು ಪ್ರಭೇದಗಳಿವೆ (i) ಒಂದೇ ಆತಿಥೇಯದಲ್ಲಿ ಜೀವನ್ನು ಪೂರ್ಣಮಾಡುವ ಎಚಿಟಮೀಬಾ ಇತ್ಯಾದಿ, (ii) ಅತಿಥೆಯಗಳಲ್ಲಿ ಜೀವನಕ್ರಮವನ್ನು ಪೂರ್ಣಗೊಳಿಸುವ ಮಲೇರಿಯ ಕಾಳಿಮಾರಿ ರೋಗಾಣುಗಳು ಇತ್ಯಾದಿ. ಏಕಕೋಶಿಕಗಳ ನಾಲ್ಕು ಪಂಗಡಗಳಿಗೂ ಸೇರಿದ ಅನೇಕ ಜೀವಿಗಳು ಪರೋಪಜೀವಿಗಳಾಗಿವೆ. ರೈಜೊಪೋಡಾ (ಬುಡಗಾಲಿಗಳು) ಪಂಗಡದಲ್ಲಿ ವ್ಯಕ್ತಿಯ ದೇಹದ ಪರೋಪಜೀವಿಗಳು ಮುಖ್ಯವಾಗಿ ಎಂಟಮೀಬಾ ಹಿಸ್ಟೊಲಿಟಿಕಾ, ಎಂ.ಕೋಲೆ, ಎಂ. ಜಿಜಿವಾಲಿಸ್, ಐ ಒಡಮೀಬಾ ಬುಟ್‍ಪಿಲೈ ಮತ್ತು ಡೈಎಂಟಮೀಬಾ ಫ್ರಜಿಲಿಸ್.

	ಕಶಾಂಗಧಾರಿ ಪಂಗಡದಲ್ಲಿ (ಫ್ಲಾಜೆಲ್ಲೇಟ್) ಲೀಷನೇಯಿ ಡೋನೋವಾಗಿ ಮತ್ತಿತರ ಪ್ರಭೇದಗಳು ಮಾನವ ಮತ್ತು ಚತುಷ್ಟಾದಿಗಳಲ್ಲಿ ಪರೋಪಜೀವಿಗಳಾಗಿವೆ. ಇವು ಅತಿಥೇಯದ ರಕ್ತ ಮತ್ತು ಅಂಗಾಂಶಗಳಲ್ಲಿರುತ್ತವೆ. ಒಂದೇ ಕಶಾಂಗವುಳ್ಳವು. ಬಲಿತ ಜೀವಿ ಉದ್ದುದ್ದವಾಗಿ ಸೀಳಿ ಎರಡಾಗುವ ಮೂಲಕ ಪ್ರಜನನ ಕ್ರಿಯೆಸಾಗಿ ಸಂಖ್ಯಾವೃದ್ಧಿ ಆಗುತ್ತದೆ.

	ಸಿಲಿಯೊಫೋರ (ಲೋಮಾಂಗಿ) : ಈ ಪಂಗಡಕ್ಕೆ ಸೇರಿದ ಪರೋಪಜೀವಿ ಬ್ಯಾಲನ್‍ಟಿಡಿಯಮ್ ಕೊಲೈ. ದೊಡ್ಡ ಕರುಳಿನಲ್ಲಿ ವಾಸಿಸುತ್ತದೆ. ಸಂತಾನೋತ್ಪತ್ತಿ ದ್ವಿವಿಭಾಜನದ (ಬೈನರಿ ಫಿಷನ್) ಮೂಲಕ ನಡೆಯುತ್ತದೆ.

	ಸ್ಪೊರೊಜೋವಾ ಪಂಗಡದ ಪರೋಪಜೀವಿಗಳಲ್ಲಿ ಮಲೇರಿಯ ಕಾಯಿಲೆಯನ್ನು ಉಂಟುಮಾಡುವ ಪ್ಲಾಸ್ಮೋಡಿಯಮ್ ಪ್ರಭೇದಗಳು ಮುಖ್ಯವಾದವು.

	ಹುಳುಗಳು (ಕ್ರಿಮಿಗಳು) : ಮನುಷ್ಯನಲ್ಲಿ ಅವಲಂಬಿಸಿರುವ ಕ್ರಿಮಿ ಪರೋಪಜೀವಿಗಳಲ್ಲಿ ಚಪ್ಪಟೆ ಹುಳುಗಳು ಮತ್ತು ದುಂಡು ಹುಳುಗಳು ಎರಡು ವಿಭಾಗಗಳಿಗೂ (ಫೈಲ) ಸೇರಿದ ಜೀವಿಗಳಿವೆ. ಮನುಷ್ಯನನ್ನು ಆಶ್ರಯಿಸುವ ಮುಖ್ಯ ಚಪ್ಪಟೆ ಕ್ರಿಮಿಗಳು ಈ ಕೆಳಗಿನವು : (ಚಿ) ಟ್ರೆಮೊಟೋಡಾ ವರ್ಗಕ್ಕೆ ಸೇರಿದ ಶಿಸ್ಕೊಸೋಮಾ ಪ್ರಭೇದಗಳು ಇವು ಶಿಷ್ಟೊಸೋಮಿಯಾಸಿಸ್ ಎಂಬ ರೋಗಸ್ಥಿತಿಯನ್ನು ಉಂಟುಮಾಡುತ್ತವೆ. ಇದೇ ವರ್ಗದ ಫ್ಯಾಸಿಯೋಲಾ ಹೆಪ್ಯಾಟಿಕಾ ಫ್ಯಾಸಿಯೊಲಿಯಸಿಸ್ ಎಂಬ ರೋಗವನ್ನು ಫ್ಯಾಸಿಯೊಲಾಪಿಸ್‍ಬಸ್ಕಿ ಎಂಬ ಕ್ರಿಮಿ ಫ್ಯಾಸಿಯೊಲಾಪ್ಸಿಯಾಸಿಸ್ ಎಂಬ ರೋಗವನ್ನು ಉಂಟುಮಾಡುತ್ತವೆ.

(b) ಸೆಸ್ಟಾಯ್ಡಿಯ ವರ್ಗಕ್ಕೆ ಸೇರಿದ ಟೀನಿಯಾಸೋಲಿಯಮ್, ಟೀನಿಯಾಸ್ಯಾಜಿನೇಟ್, ಹೈಮೆನೋಪಿಸ್‍ನಾನ ಮತ್ತು ಎಕೈನೊಕಾಕಸ್.

ಪರೋಪಜೀವಿ ದುಂಡು ಹುಳುಗಳ ಪೈಕಿ ಮಾನವ£ನ್ನು ಅವಲಂಬಿಸಿರುವಂಥವು ಈ ಮುಂದಿನವು ; ಟ್ರೈಕ್ಯೂರಿಯಮ್, ಟ್ರೈಕಿಯೂರ, ಟ್ರೆಕಿನೆಲ್ಲಾ ಸ್ಟೈರಾಲಿಸ್, ಎಂಟರೋಬಿಯಸ್ ಪರ್ಮಿಕ್ಯುಲಾರಿಸ್ (ಸೂಜಿ ಕ್ರಿಮಿ). ಅಸ್ಕ್ಯಾರಿಸ್ ಲಂಬ್ರಿ ಕಾಯ್ಡಿಸ್ (ಜಂತುಹುಳು), ನೆಕೇಟರ್ ಅಮೆರಿಕಾನಸ್ ಮತ್ತು ಅಂಕೈಲೊಸ್ಟೋಮ ಡ್ಯುಯೊಡಿನೇಲ್. ಡ್ರಾಕುನ್‍ಕ್ಯುಲಸ್ ಮೆಡಿನೆನ್‍ಸಿಸ್ (ನಾರು ಹುಣ್ಣುಹುಳು) ಉಷೆರೇರಿಯ ಬ್ಯಾನ್‍ಕ್ರಾಫ್ಟೈ (ಆನೆಕಾಲು ರೋಗದ ಹುಳು) ಮತ್ತು ಬ್ರೂಗಿಯ ಮಲೇರಿಯ.
ಮಾನವನ ಹಲವು ಮುಖ್ಯ ಪರೋಪಜೀವಿಜನ್ಯ ರೋಗಗಳ ಸ್ಥೂಲ ವಿವರಣೆ ಅಮೀಬಿಯಾಸಿಸ್ : ಎಂಟಮೀಬಾ ಹಿಸ್ಟೊಲಿಟಿಕಾದಿಂದ ಉಂಟಾಗುತ್ತದೆ. ಇದು ಆಮಶಂಕೆಗೆ ಇಲ್ಲವೇ ಯಕೃತ್ತಿನಲ್ಲಿ ಕುರುವಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಪ್ರಪಂಚದ ಎಲ್ಲ ಭಾಗಗಳಲ್ಲಿ ಇದು ಕಂಡುಬಂದರೂ ಉಷ್ಣವಲಯದಲ್ಲಿ ಇದರ ಹಾವಳಿ ಜಾಸ್ತಿ. ಎಂ ಹಿಸ್ಟೊಲಿಟಿಕಾ ಎಂಬುದು ಮನುಷ್ಯನ ಕರುಳಿನಲ್ಲಿ ಚರ ಮತ್ತು ಸ್ಥಿರ ಎರಡು ಸ್ಥಿತಿಗಳಲ್ಲು ಜೀವಿಸುತ್ತದೆ. ಚರಸ್ಥಿತಿಯಲ್ಲಿ ಕ್ರಿಮಿ ಮಿಥ್ಯಪಾದಗಳಿಂದ ಚಲಿಸುತ್ತದೆ. ಸ್ಥಿರ ಸ್ಥಿತಿಯಲ್ಲಿ ಇದು ಗುಂಡಗಿರುವ ಬೀಜಾಣು (ಸಿಸ್ಟ್): ಬೀಜಾಣುಗಳು ಕರುಳಿನಲ್ಲಿ ಮತ್ತು ಮಲದಲ್ಲಿರುತ್ತವೆ. ಚರಕ್ರಿಮಿಗಳು ದೊಡ್ಡಕರುಳಿನ ಲೋಳೆಪೊರೆಯನ್ನು ಗಾಸಿಗೊಳಿಸುತ್ತವೆ. ಗಾಸಿಗಳು ಮೂಗರುಳಿನಲ್ಲಿ ಜಾಸ್ತಿ, ಮಲದ್ವಾರದವರೆಗೂ ಇರಬಹುದು. ಲೋಳೆಪೊರೆಯಲ್ಲಿ ಸಣ್ಣ ಸಣ್ಣ ಎತ್ತರ ಎಡೆಗಳು ಉಂಟಾಗುತ್ತವೆ. ಇವು ಒಡೆದು ಸೀಸೆಯ ಆಕಾರದ ಹುಣ್ಣುಗಳಾಗುತ್ತವೆ. ಇವುಗಳ ನಡುವೆ ಲೋಳೊಪೊರೆ ಆರೋಗ್ಯವಾಗಿಯೇ ಇರುತ್ತದೆ. ಹುಣ್ಣುಗಳಿಂದ ಹೊರಬಿದ್ದ ಕೀವು ಮತ್ತು ರಕ್ತ ರೋಗಿಯ ಮಲದಲ್ಲಿ ಕಾಣಿಸಬಹುದು. ಅಮೀಬಗಳು ಕರುಳಿನ ಅಭಿಧಮನಿಗಳೊಳಗೆ ಪ್ರವೇಶಿಸಿ ಪಿತ್ತಜನಾಕಾಂಗವನ್ನು ಸೇರಿ ಅಲ್ಲಿ ವೃದ್ಧಿಹೊಂದುತ್ತವೆ. ಪಿತ್ತಜನಾಕಾಂಗದ (ಯಕೃತ್ತಿನ) ಕಣಜಾಲಗಳು ಹಾಳಾಗಿ ಯಕೃತ್ತಿನ ಕುರು ಉಂಟಾಗಬಹುದು. ಸೋಂಕು ವಪೆಯ ಮೂಲಕ ಪುಪ್ಪುಸಗಳಿಗೂ ಹಬ್ಬಬಹುದು. ಉದರದಲ್ಲಿ ಅನೇಕ ಅಂಗಗಳಿಗೆ ವ್ಯಾಪಿಸಬಹುದು. ಮಿದುಳನ್ನು ತಲಪುವ ಸಾಧ್ಯತೆಯೂ ಉಂಟು ಅಮೀಬಗಳು ಅಪರೂಪವಾಗಿ ದೊಡ್ಡ ಕರುಳಿನ ಗೋಡೆಯ ಮಾಂಸದ ಪದರವನ್ನು ಭೇದಿಸುವುದರಿಂದ ಒಂದೊಂದು ಸಲ ದೊಡ್ಡ ರಕ್ತನಾಳಗಳು ಒಡೆದು ರಕ್ತಸ್ರವಾವ ಉಂಟಾಗಬಹುದು. ರೋಗ ಸುಪ್ತಾವಸ್ಥೆಯಲ್ಲಿದ್ದಾಗ ಬೀಜಾಣುಗಳು ಮಲದಲ್ಲಿ ವಿಸರ್ಜಿಸಲ್ಪಡಬಹುದು. ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಕ್ಕೆ ಇವೇ ಕಾರಣ. ಚರಕ್ರಿಮೆಯಿಂದ ಸೋಂಕು ಹರಡುವುದಿಲ್ಲ. ರೋಗ ಮಲಿನ ಹಸ್ತ, ಕುಲುಷಿತ ಆಹಾರ, ನೀರು, ನೊಣ ಹಾಗೂ ರೋಗಿಯ ಸಂಪರ್ಕದಿಂದ ಹರಡುತ್ತದೆ. 

ರೋಗಲಕ್ಷಣಗಳು. (ಚಿ) ತೀವ್ರವಾದ ಅಮೀಬಜನಿತ ಆಮಶಂಕೆ : ಇದು ಬ್ಯಾಸಿಲ್ಲರಿ ಆಮಶಂಕೆಗಿಂತ ನಿಧಾನವಾಗಿ ಶುರುವಾಗುತ್ತದೆ. ಅಷ್ಟಾಗಿ ಜ್ವರವಾಗಲಿ ಇತರ ದೈಹಿಕ ಚಿಹ್ನೆಗಳಾಗಲಿ ಇರುವುದಿಲ್ಲ. ಕೆಲಹೊಟ್ಟೆಯಲ್ಲಿ ನುಲಿತವುಂಟಾಗುತ್ತದೆ. ರಕ್ತ ಮತ್ತು ಆಮಿನಿಂದ ಕೂಡಿದ ಆಮಶಂಕೆ ಭೇದಿ ಹಲವಾರು ಸಲವಾಗುತ್ತದೆ. ತಾನೇ ವಿಸರ್ಜಿಸಿದ ಮಲದಲ್ಲಿರುವ ಬೆಚ್ಚಗಿರುವ ಆಮನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದಾಗ ಅದರಲ್ಲಿ ಚಲಿಸುತ್ತಿರುವ ಅಮೀಬಗಳು ಕಾಣಿಸಬಹುದು.
(b) ಕೆಲವರಿಗೆ ತೀವ್ರವಾದ ಆಮಶಂಕೆ ಭೇದಿ ಆಗುವುದಿಲ್ಲ. ಬದಲು ರೋಗನಿಧಾನವಾಗಿ ನೆಲೆಗೊಳ್ಳುತ್ತದೆ. ಆಗಾಗ್ಗೆ ಭೇದಿಯಾಗಿ ಹೊಟ್ಟೆಯಲ್ಲಿ ನುಲಿತ ಆಯಾಸ ಆಗಬಹುದು. ಮಲದಲ್ಲಿ ಸಾಮಾನ್ಯವಾಗಿ ಆಮು ಇರುತ್ತದೆ. ರಕ್ತ ಇರುವುದಿಲ್ಲ. ಹೊಟ್ಟೆಯನ್ನು ಮುಟ್ಟಿ ಪರೀಕ್ಷೆ ಮಾಡಿದಾಗ ಬಲ ಕೆಳಹೊಟ್ಟೆಯಲ್ಲಿ ನೋವಿರುವುದೂ ಮೂಗರುಳೂ (ಸೀಕಮ್) ದಪ್ಪವಾಗಿರುವುದೂ ಗೊತ್ತಾಗಬಹುದು. ರೋಗ ಚಿಹ್ನೆಗಳು ಅಪೆಂಡಿಸೈಟಿಸ್ ಕಾಯಿಲೆಯ ಚಿಹ್ನೆಗಳನ್ನು ಮುಂಗುರುಳಿನ ಹುಣ್ಣಿನ ಚಿಹ್ನೆಗಳನ್ನೂ ಹೋಲಬಹುದು. ಕೆಲವು ವೇಳೆ ರೋಗಚಿಹ್ನೆಗಳು ಏನೂ ಇಲ್ಲದೆ ಇರಬಹುದು. ರೋಗ ಹಾಗೆ ಬಂದು ಹೀಗೆ ಹೋಗಿರಬಹುದು. ಮಲದಲ್ಲಿ ಪಾಲಜೀಕಣಗಳು ಅಥವಾ ಜಿಟ್ಟೆಗಳು ಕಾಣಿಸಬಹುದು.

ಈಲಿಯುರಿತ ಮತ್ತು ಯಕೃತ್ತಿನ ಕುರು : ಅಮೀಬಗಳು ರಕ್ತನಾಳಗಳ ಮೂಲಕ ಯಕೃತ್ತನ್ನು ಸೇರುವುದರಿಂದ ಸಣ್ಣ ಸಣ್ಣ ಕುರುಗಳು ಉಂಟಾಗಬಹುದು. ಈ ಸ್ಥಿತಿಗೆ ಅಮೀಬದ ಈಲಿಯುರಿತ ಎಂದು ಹೆಸರು. ಬಿಡಿ ಕುರುಗಳು ದೊಡ್ಡವಾಗುತ್ತ ಬಂದು ದೊಡ್ಡ ಒಂದು ಕುರುವಿನಲ್ಲಿ ಐಕ್ಯವಾಗುತ್ತವೆ. ಈಲಿಯುರಿತ ಜ್ವರ, ಬಲಹೊಟ್ಟೆಯಲ್ಲಿ ನೋವು ಉಂಟಾಗಬಹುದು. ಯಕೃತ್ತು ದೊಡ್ಡದಾಗುತ್ತದೆ. ಮತ್ತು ಆ ಸ್ಥಳದಲ್ಲಿ ಉದರಭಿತ್ತಿಯನ್ನು ಒತ್ತಿದರೆ ನೋವುಂಟಾಗತ್ತ ಬಿಳಿಯ ರಕ್ತಕಣಗಳು ರಕ್ತದಲ್ಲಿ ಜಾಸ್ತಿಯಾಗಬಹುದು.

	ಮಲೇರಿಯ : ಮಲೆನಾಡು ಜ್ವರ ಮತ್ತು ಚಳಿಜ್ವರ ಎಂಬ ಹೆಸರುಗಳು ಇವೆ. ಉಷ್ಣವಲಯಗಳಲ್ಲಿ ಕಂಡುಬರುವ ಕಾಯಿಲೆಗಳ ಪೈಕಿ ಮಲೇರಿಯ ಕಾಯಿಲೆ ಬಹಳ ಮುಖ್ಯವಾದದ್ದು ಅನಾಫಿಲೀಸ್ ಸೊಳ್ಳೆ ಇದ್ದು ಸೊಳ್ಳೆಯಲ್ಲಿ ಪರೊಪಜೀವಿ ವೃದ್ಧಿಹೊಂದಲು ಅನುಕೂಲವಾದ ಉಷ್ಣತೆ ಮತ್ತು ತೇವ ಇದ್ದಲ್ಲಿ ಹಾವಳಿ ಜಾಸ್ತಿ. ಮಲೇರಿಯದಲ್ಲಿ ನಾಲ್ಕು ಬಗೆಗಳಿವೆ : ಮೋಡಿಯ ವೈವಾಕ್ಸಿನಿಯನ್ ಉಂಟಾಗುವ ಬಿನೈನ್ ಟರ್ಷಿಯನ್ ಮಲೇರಿಯ, ಪ್ಲಾಸೋಡಿಯಮ್ ಮಲೇರಿಯದಿಂದ ಉಂಟಾಗುವ ಕ್ವಾರ್ಟನ್ ಮಲೇರಿಯ, ಪ್ಲಾಸ್ಮೊಡಿಯಮ್ ಫಾಲ್ಸಿಫಾರಮ್ಮಿನಿಂದ ಉಂಟಾಗುವ ಮ್ಯಾಲಿಗ್ನೆಂಟ್ ಟರ್ಷಿಯನ್ ಮಲೇರಿಯ, ಮತ್ತು ಪ್ಲಾಸ್ಮೋಡಿಯಮ್ ಓವೇಲಿನಿಂದ ಉಂಟಾಗುವ ಬಿನೈನ್ ಟರ್ಷಿಯನ್ ಮಲೇರಿಯ, ಭಾರತದಲ್ಲಿ ಮತ್ತು ಆಗ್ನೇಯ ಏಷ್ಯದಲ್ಲಿ ಪ್ಲಾ. ವೈವಾಕ್ಸಿನಿಂದ ಮಲೇರಿಯ ಜಾಸ್ತಿ. ಪ್ಲಾ. ಮಲೇರಿಯ ಮತ್ತು ಓವೇಲುಗಳು ಅಷ್ಟು ಜಾಸ್ತಿಯಾಗಿ ಕಂಡುಬರುವುದಿಲ್ಲ. ಆಫ್ರಿಕದಲ್ಲಿ ಪ್ಲಾ. ಫಾಲ್ಯಿಫಾರಮನಿಂದ ಉಂಟಾಗುವ ಮಲೇರಿಯ ಕಾಯಿಲೆ ಜಾಸ್ತಿ. ಪ್ಲಾ. ಮಲೇರಿಯದಲ್ಲಿ ಮೂರು ದಿವಸಗಳಿಗೊಮ್ಮೆ ಜ್ವರ ಕಾಣಿಸಿಕೊಂಡರೆ ಉಳಿದವರಲ್ಲಿ ಅದು ಎರಡು ದಿವಸಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.

	ಮಲೇರಿಯ ಕ್ರಿಮಿಯ ಜೀವನ ವೃತ್ತಾಂತ : ಮಲೇರಿಯ ರೋಗದ ಒಂದು ಹಂತದಲ್ಲಿ ಪ್ಲಾಸ್ಮೋಡಿಯಮ್ಮಿನ ಲೈಗಿಂಕ ವರ್ಗಗಳು ರಕ್ತದಲ್ಲಿರುತ್ತವೆ. ಅನಾಫಿಲೀಸ್ ಹೆಣ್ಣುಸೊಳ್ಳೆ ಮನುಷ್ಯನ ರಕ್ತವನ್ನು ಹೀರಿದಾಗ ಇವು ಅದರ ಹೊಟ್ಟೆಯನ್ನು ಹೊಕ್ಕು ಅಲ್ಲಿ ಗಂಡು ಹೆಣ್ಣು ಕೂಟ ಜೀವಕಣಗಳು (ಗ್ಯಾಮೆಟೋ ಸೈಟುಗಳು) ಮಿಲನಹೊಂದಿ ಭ್ರೂಣಾಣುವಾಗುತ್ತದೆ. ಇದು ಚಲಿಸುತ್ತ ಚರ್ಮದ ಆವರಣದ ಪೊರೆಯ ಮೂಲಕ ಒಳಹೊಕ್ಕು ಕೋಶಾವರಣವನ್ನು ಪಡೆದು ಚೀಲದಂತಾಗುತ್ತದೆ. ಒಂದು ವಾರದಿಂದ ಮೂರು ವಾರಗಳ ಮೇಲೆ ಈ ಚೀಲದಿಂದ ಸೋಂಕಿನ ಅಣುಗಳು (ಸ್ಪೋರೋಜೈಟ್ಸ್) ಬಿಡುಗಡೆ ಹೊಂದಿ ಸೊಳ್ಳೆಯ ಲಾಲಾರಸ ಗ್ರಂಥಿಗಳನ್ನು ಸೇರುತ್ತವೆ. ಈ ಸೊಳ್ಳೆಗಳು ಮನುಷ್ಯನನ್ನು ಕಚ್ಚಿದಾಗ ಅದರ ಜೊಲ್ಲಿನೊಡನೆ ಆತನ ರಕ್ತವನ್ನು ಸೇರುತ್ತವೆ. ಅಲ್ಲಿಂದ ಯಕೃತ್ತಿನ ಜೀವಕಣಗಳನ್ನು ಸೇರಿ ವೃದ್ಧಿ ಹೊಂದುತ್ತವೆ. ಆರೂವರೆ ದಿವಸಗಳಿಂದ (ಫ್ಲಾ. ಫಾಲ್ಸಿಫಾರಮ್) ಎಂಟೂವರೆ ದಿವಸಗಳ (ಪ್ಲಾ.ವೈವಾಕ್ಸ್) ಮೇಲೆ ಬಹುಸಂಖ್ಯೆಯಲ್ಲಿ ವೀರೋಜಾóಯಿಟುಗಳು (ತುಂಡು ಅಣುಜೀವಿ) ಬಿಡುಗಡೆ ಹೊಂದಿ ರಕ್ತವನ್ನು ಸೇರುತ್ತವೆ. (ಕೆಂಪು ರಕ್ತಕಣದಲ್ಲಿ ಮೊದಲು ಉಂಗುರುದಂತೆಯೂ ಆಮೇಲೆ ಶೈಸಾಂಟ್ಸುಗಳಾಗಿಯೂ (ಸೀಳು ಜನಿಕ) ಪರಿವರ್ತನೆಗೊಂಡು ಕೆಂಪುಕಣದ ವಿಭಜನೆಯಿಂದ ಹೊಸವರ್ಗದ ಮೀರೊಜಾóಯಿಟ್ಸುಗಳಾಗಿ ರಕ್ತಕಣಗಳು ಒಡೆದಾಗ ರಕ್ತವನ್ನು ಸೇರುತ್ತವೆ. ಈ ಅಲೈಂಗಿಕ ವೃದ್ಧಿ ಮೂರರ ಚಳಿಯಲ್ಲಿ 48 ಗಂಟೆಗೆ ಒಂದು ಬಾರಿಯೂ ನಾಲ್ಕರ ಚಳಿಯಲ್ಲಿ 72 ಗಂಟೆಗೆ ಒಂದು ಬಾರಿಯೂ ಆಗುತ್ತದೆ. ಇದರಿಂದ ದಿವಸ ಬಿಟ್ಟು ದಿವಸ ಬರುವ ಚಳಿ ಜ್ವರ ಮತ್ತು ನಾಲ್ಕರ ಚಳಿಜ್ವರ ಉಂಟಾಗುತ್ತವೆ. ಮೀರೊ ಜಾಯಿಟ್ಸುಗಳು ಹೊಸ ರಕ್ತಕಣವನ್ನು ಸೇರುತ್ತವೆ. ಈ ತರಹ ಶೈಸಾಗನಿ (ಸೀಳುಜನನ) ಚಕ್ರವಾದ ಬಳಿಕ ಕೆಲವು ಮೀರೊ ಜಾóಯಿಟ್ಸುಗಳು ಪುಂಸ್ತ್ರೀ ಕೂಟಜೀವಕಣಗಳಾಗಿ ಪರಿವರ್ತನೆ ಹೊಂದುತ್ತವೆ. ಚಳಿ ಮತ್ತು ಜ್ವರ ಈ ರೋಗದ ಮುಖ್ಯಲಕ್ಷಣಗಳು. ಶುರುವಿನಲ್ಲಿ ಜ್ವರ, ತಲೆನೋವು, ಇರುಸುಮುರುಸು ಮತ್ತು ವಾಂತಿ ಉಂಟಾಗುತ್ತವೆ. ಒಂದು ವಾರದಲ್ಲಿಯೇ ದಿವಸ ಬಿಟ್ಟುದಿವಸ ಬರುವ ಜ್ವರ ಅಥವಾ ಮೂರು ದಿವಸಗಳಿಗೊಂದು ಸಾರಿ ಬರುವ ಜ್ವರ ಉಂಟಾಗುತ್ತದೆ. ಕೆಲವು ರೋಗಿಗಳಲ್ಲಿ ಈ ತರಹದ ವಾಯಿದೆ ಜ್ವರವಿರುವುದಿಲ್ಲ. ಇವರಲ್ಲಿ ಕ್ರಿಮಿಯ ಎರಡು ತರಹ ತಳಿಗಳು ಇರಬಹುದು.

	ಮಲೇರಿಯ ಜ್ವರದಲ್ಲಿ ಸಾಮಾನ್ಯವಾಗಿ ಕೆಲವು ಹಂತಗಳು ಇರುತ್ತವೆ. ಚಳಿ ಹಂತ ಜ್ವರದ ಹಂತ ಮತ್ತು ಬೆವರು ಹಂತ. ಸಾಮಾನ್ಯವಾಗಿ ಮಲೇರಿಯ ಜ್ವರದಲ್ಲಿ ಮೊದಲು ಚಳಿ ಉಂಟಾಗುತ್ತದೆ. ಹಲ್ಲು ಕಡಿಯುವಷ್ಟು ಕೊರೆತ, ನಾಲ್ಕಾರು ಕಂಬಳಿ ಹೊದ್ದು ಕೊಂಡರೂ ಚಳಿ ಹೋಗದು. ರೋಗಿ ಚಳಿಯಿಂದ ನಡುಗುತ್ತಿರಿತ್ತಾನೆ. ಕೆಲವು ನಿಮಿಷ ಅಥವಾ ಗಂಟೆಗಳಾದ ಮೇಲೆ ಬಿಸಿಯ ಹಂತ ಶುರುವಾಗುತ್ತದೆ. ಈ ಹಂತದಲ್ಲಿ ರೋಗಿಗೆ ತಲೆನೋವು, ವಾಂತಿ ಮತ್ತು ತೀವ್ರವಾದ ಜ್ವರ (1030ಈ ನಿಂದ 1050ಈ) ಬರುತ್ತದೆ. ಚರ್ಮ ಬಿಸಿಯಾಗಿ ಒಣಗಿದ ಹಾಗಾಗುತ್ತದೆ. ಮುಂದಿನ ಹಂತದಲ್ಲಿ ಮೈಯೆಲ್ಲ ಚೆನ್ನಾಗಿ ಬೆವರಿ ಜ್ವರ ಕಮ್ಮಿಯಾಗುತ್ತದೆ. ರೋಗಿಗೆ ಜ್ವರವಿಲ್ಲದೆ ಹುಷಾರಾಗಿದ್ದ ಹಾಗೆ ಕಂಡುಬರುತ್ತದೆ ಆದರೆ ಎರಡು ಮೂರು ದಿವಸಗಳಲ್ಲಿ ಪುನಃ ಬರುತ್ತದೆ ಈ ತರಹ ಎರಡು ಮೂರು ಸಲ ಜ್ವರ ಬಂದ ಮೇಲೆ ಗುಲ್ಮ ದೊಡ್ಡದಾಗುತ್ತದೆ. ಚಿಕಿತ್ಸೆ ಇಲ್ಲದೆ ಹಾಗೆಯೇ ಬಿಟ್ಟರೆ ರಕ್ತಕಣಗಳ ನಾಶದಿಂದ ರಕ್ತಹೀನತೆ ಉಂಟಾಗಿ ಅಶಕ್ತತೆ ಉಂಟಾಗುತ್ತದೆ. ರಕ್ತವನ್ನು ಗಾಜಿನ ಹಲಗೆಯ (ಸ್ಲೈಡ್) ಮೇಲೆ ಸವರಿ ಬಣ್ಣ ಕಟ್ಟಿ ಸೂಕ್ಷ್ಮದರ್ಶಕದಿಂದ ನೋಡಿದಾಗ ಮಲೇರಿಯ ಕ್ರಿಮಿಗಳು ಕಾಣಿಸುತ್ತವೆ. ಅವು ಯಾವ ತಳಿಗೆ ಸೇರಿದವೆಂದು ಹೇಳಬಹುದು.

	ವಿಷಮ ಮೂಗುಡುವಿನ ಮಲೇರಿಯ ಅತಿ ಅಪಾಯಕಾರಿ ಇದರಿಂದ ಮಿದುಳಿನ ಮಲೇರಿಯ ಮತ್ತು ರಕ್ತಮೂತ್ರಜ್ವರ ಉಂಟಾಗಬಹುದು. ಮಿದುಳಿನ ಮಲೇರಿಯದಲ್ಲಿ ಪ್ಲಾ. ಫಾಲ್ಸಿಪಾರಮ್ಮನ್ನು ಒಳಗೊಂಡ ಕೆಂಪು ರಕ್ತಕಣಗಳು ಲೋಮನಾಳಗಳ ಗೋಡೆಗೆ ಆತುಕೊಂಡು ರಕ್ತಚಲನೆಯನ್ನು ತಡೆಗಟ್ಟುತ್ತವೆ. ಇದರಿಂದ ತಲೆದೋರುವ ಆಕ್ಸಿಜನ್ ಕೊರತೆಯಿಂದ ಮಿದುಳಿನ ಕೆಲಸಕ್ಕೆ ಅಡಚಣೆ ಆಗುತ್ತದೆ. ತೀವ್ರ ಜ್ವರ, ತೂಕಡಿಕೆಯಿಂದ ಕೂಡಿದ ಸೆಳವು. ಅರಜೋಗರಿಕೆ ಮುಂತಾದವು ಉಂಟಾಗಬಹುದು. ಚಿಕೆತ್ಸೆಯನ್ನು ಬೇಗ ಶುರುಮಾಡದಿದ್ದರೆ ಸಂಭವಿಸಬಹುದು.

	ರಕ್ತಮೂತ್ರ ಜ್ವರ : ಮಲೇರಿಯ ರೋಗಕ್ಕೆ ಕ್ವೀನೀನನ್ನು ಆಕ್ರಮವಾಗಿ ಮತ್ತು ಕಮ್ಮಿಗುಟ್ಟಿಯಲ್ಲಿ (ಡೋಸ್) ಕೊಟ್ಟಾಗ ಈ ತೊಡಕು ಉಂಟಾಗಬಹುದು. ಚಳಿಯಿಂದ ಶುರುವಾಗಿ ಜ್ವರ, ತಲೆನೋವು, ವಾಂತಿ ಮತ್ತು ಬಿಕ್ಕಲು ಉಂಟಾಗುತ್ತವೆ. ಈ ರೋಗದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗಿ ನಾಶವಾಗುತ್ತವೆ. ಇದರಿಂದ ಮೂತ್ರದಲ್ಲಿ ಹೀಮೊಗ್ಲೋಬಿನ್ ಸೇರಿಕೊಂಡು ಹೋಗುತ್ತದೆ. 24 ಗಂಟೆಗಳಲ್ಲಿ ಅರಿಶಿನ ಕಾಮಾಲೆ ಉಂಟಾಗುತ್ತದೆ. ಮೂತ್ರ ಕಪ್ಪುಮಿಶ್ರಿತ ಕೆಂಪಾಗಿರುತ್ತದೆ. ಹೀಮೋಗ್ಲೋಬಿನ್ ಮೂತ್ರಜನಕಾಂಗದ ನಾಳಗಳಲ್ಲಿ ಸೇರಿಕೊಂಡು ಮೂತ್ರದ ಉತ್ಪತ್ತಿಯನ್ನು ನಿಲ್ಲಿಸುತ್ತದೆ. ಮೂತ್ರ ನಿಲುಗಡೆಯಾಗಿ ರೋಗಿ ಸಾಯಬಹುದು.

	ಲೀಷ್ಮೆನಿಯಾಸಿಸ್ : ಲೀಷ್ಮೆನಿಯಾ ಎಂಬ ಜಾತಿಗೆ ಸೇರಿದ ಕ್ರಿಮಿಯಿಂದ ಲೀಷ್ಮೇನಿಯಾಸಿಸ್ ಎಂಬ ವರ್ಗಕ್ಕೆ ಸೇರಿದ ಕಾಯಿಲೆಗಳು ಉಂಟಾಗುತ್ತವೆ. ಈ ರೋಗ ಮನುಷ್ಯನಿಗೆ ಮರಳು ನೊಣಗಳಿಂದ ಹರಡುತ್ತದೆ. ಲೀಷ್ಮೇನಿಯಾದ ಕೊರಡಾಂಗಿ (ಫ್ಲಾಜೆಲ್ಲೇಟ್) ರೂಪಗಳು ಮರಳು ನೊಣದಲ್ಲಿ ಇರುತ್ತವೆ. ಮನುಷ್ಯನಲ್ಲಿ ನವಿರು ಜಾಲ ಲೋಳೆಪೊರೆ ಗಂತಿಯ ಕೋಶದೊಳಗೆ (ರೆಟಿಕ್ಯುಲೊ ಎನ್‍ಡೋತೀಲಿಯಲ್ ಸೆಲ್) ಅಂಡಾಕಾರದಲ್ಲಿರುತ್ತವೆ. ಇವಕ್ಕೆ ಲೀಷ್ಯನ್ ಡೋನೋವನ್ ಬಾಡೀಸ್ ಎಂದು ಹೆಸರು. ಲೀಷ್ಮೇನಿಯಾಸಿನಲ್ಲಿ ಅಂತರಿಕಾಂಗಗಳ ಲೀಷ್ಮನಿಯಾಸಿಸ್ ಮತ್ತು ಚರ್ಮದ ಲೀಷ್ಮೇನಿಯಾಸಿಸ್ ಎಂಬ ಎರಡು ಬಗೆ ರೋಗಗಳಿವೆ.

	ಕಾಲ ಅಸಾರ್ (ಕಾಳಿಮಾರಿ ಜ್ವರ) : ಇದು ಭಾರತ, ಪಾಕಿಸ್ತಾನ, ಎಥಿಯೋಪಿಯಾ, ಪೂರ್ವ ಮತ್ತು ಪಶ್ಚಿಮ ಆಫ್ರಿಕಾ, ಏಷ್ಯ, ಮೈನರ್, ಚೀನ ಮತ್ತು ಅಮೆರಿಕ ದೇಶಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಕಂಡುಬರುವ ಕಾಯಿಲೆಯಲ್ಲಿ ಮನುಷ್ಯನೇ ಮುಖ್ಯ ಅತಿಥೇಯ. ಇತರ ಕಡೆ ನಾಯಿ ಮುಖ್ಯ ಅತಿಥೇಯ. ನವಿರುಜಾಲಲೊಳೆ ಪೊರೆಗಂತಿಯ ಕೋಶದೊಳಗೆ ಲೀಷ್ಮನಿಯಾಗಳು ದ್ವಿವಿಭಾಜನದ ಮೂಲಕ ವೃದ್ಧಿ ಹೊಂದುತ್ತವೆ. ಆ ಕೋಶಗಳು ಒಡೆದು ಲೀಷ್ಮನ್ ಡೋನೋವನ್ ರೂಪಗಳ ಅನೇಕ ಅಂಗಾಂಗಳ ನವಿರುಜಾಲ ಲೋಳೆಪೊರೆಗಂತಿಯ ಕೋಶದೊಳಗೆ ಸೇರುತ್ತವೆ. ಯಕೃತ್ತು ಮತ್ತು ಗುಲ್ಮ ಬಹಳ ದೊಡ್ಡದಾಗುತ್ತವೆ. ಬಿಳಿಯ ರಕ್ತಕಣಗಳು ಕಮ್ಮಿಯಾಗುತ್ತವೆ. ಪಕ್ವಾವಧಿ ಮೂರರಿಂದ ಆರು ತಿಂಗಳುಗಳು. ಕಾಯಿಲೆ ನಿಧಾನವಾಗಿ ಇಲ್ಲವೇ ಏಕಾ ಎಕಿ ಬಿಟ್ಟುಬರುವ ಜ್ವರ, ಬೆವರುವಿಕೆಯೊಡನೆ ಶುರುವಾಗಬಹುದು. ಗುಲ್ಮ ಮತ್ತು ಯಕೃತ್ತು ದೊಡ್ಡವಾಗಿ ರೋಗಿಗೆ ರಕ್ತಹೀನತೆ ಮತ್ತು ಸೊರಗಣೆ ಉಂಟಾಗಬಹುದು ; ಮುಖದ ಮೇಲೆ ಬಣ್ಣವೇದಿಕೆ ಉಂಟಾಗಬಹುದು. ದುಗ್ಧರಸ ಗ್ರಂಥಿಗಳು ದೊಡ್ಡವಾಗಬಹುದು. ರೋಗ ಚುರುಕಾಗಿದ್ದಾಗ ದಿವಸಕ್ಕೆ ಎರಡಾವರ್ತಿ ಜ್ವರ ಕಾಣಿಸಿಕೊಳ್ಳಬಹುದು. ಮುಖ, ಹೊಟ್ಟೆಕಾಲುಗಳು ಊದಬಹುದು. ಆಮಶಂಕೆಮತ್ತು ಪುಪ್ಪುಸಗಳ ಉರಿತಗಳು ಉಂಟಾಗಬಹುದು. ಕಾಯಿಲೆ ವಾಸಿಯಾದ ಹಾಗೆ ಕಂಡುಬಂದು ಎರಡು ಮೂರು ವರ್ಷದ ಮೇಲೆ ಯಾವ ಭಾಗದಲ್ಲಿಯಾದರೂ ಕೆಂಪು ಅಥವಾ ಬಣ್ಣ ಕಮ್ಮಿಯಾದ ಮಚ್ಚೆಯಾಗಿ ಆಮೇಲೆ ಮುಖದ ಮೇಲೆ ಕಿಗ್ಗಂಟು (ನ್ಯಾಡ್ಯೂಲ್) ತಲೆದೊರಬಹುದು.

	ರಕ್ತದಲ್ಲಿ ಗ್ಲಾಮ ಗ್ಲಾಬ್ಯುಲಿನ್ ಜಾಸ್ತಿ ಆಗಬಹುದು. ಫಾರ್ಮಲ್ ಜೆಲ್ ಪರೀಕ್ಷೆ ಮತ್ತು ಚೋಪ್ರಾಸ್ ಪರೀಕ್ಷೆಯಿಂದ ಈ ಕಾಯಿಲೆಯನ್ನು ಪತ್ತೆಹಚ್ಚಬಹುದು, ಎಲುಬಿನ ಮಜ್ಜೆಯ ಸವರನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷೆ ಮಾಡಿದಾಗ ಕ್ರಿಮಿಗಳು ಕಾಣಿಸಬಹುದು. ಪಿತ್ತಜನಕಾಂಗ ಮತ್ತು ಗುಲ್ಮಗಳಿಗೆ ಸೂಜಿ ಹಾಕಿ ಅದರ ಸವರನ್ನು ಪರೀಕ್ಷಿಸಿದಾಗಲೂ ಇವು ಕಾಣಿಸಬಹುದು.

	ಹುಣ್ಣು : ಲೀಷ್ಮೇನಿಯಾ ಟ್ರಾಪಿಕ್ ಎಂಬ ಕ್ರಿಮಿಯಿಂದ ಈ ಕಾಯಿಲೆ ಉಂಟಾಗುತ್ತದೆ ಇದು ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ಕಂಡು ಬರುತ್ತದೆ.ಇದರ ಪಕ್ವಾವಧಿ ಎರಡು ವಾರಗಳಿಂದ ಐದು ವರ್ಷಗಳತನಕವೂ ಇರಬಹುದು. ಒಂದು ಅಥವಾ ಅನೇಕ ಕಡಿತವುಳ್ಳ ಸಣ್ಣ ಮಿಟ್ಟಿದದ್ದುಗಳು ಚರ್ಮದ ಮೇಲೆ ಉಂಟಾಗಿ ಅವು ಗಾತ್ರದಲ್ಲಿ ದೊಡ್ಡದಾಗುತ್ತವೆ. ಮೇಕಲಗಳ ಮೇಲೆ ಸಿಪ್ಪೆಗಟ್ಟುತ್ತದೆ. ಚಿಕೆತ್ಸೆ ಮಾಡದಿದ್ದರೆ, ಇವು ದುಂಡಗಿನ ಹುಣ್ಣಗಳಾಗಿ ಮಾರ್ಪಾಡು ಹೊಂದುತ್ತವೆ. ಇವುಗಳ ವ್ಯಾಸ 10 ಸೆಂಮೀನಷ್ಟಿರಬಹುದು. ಇವುಗಳಿಂದ ಕೀವು ರಕ್ತ ಮಿಶ್ರಣ ಹೊಂದಿದ ರಸ ಸುರಿಯಬಹುದು. ಇವು ಒಣಗಿ ಸಿಪ್ಪೆ ಗಟ್ಟಬಹುದು. ನೋವು ಜಾಸ್ತಿ ಭಾಸವಾಗದು. ಸಾಮಾನ್ಯ ದೈಹಿಕ ಲಕ್ಷಣಗಳು ಕಂಡುಬರುವು ಹುಣ್ಣಿನ ತುದಿಗೆ ಸೂಜಿಹಾಕಿ ಅದರಲ್ಲಿ ಬರುವ ರಸವನ್ನು ಪರೀಕ್ಷಿಸಿದಾಗ ಲೀಷ್ಮನ್ ಡೋನೊವಾನ್ ರೂಪಗಳು ಕಾಣಿಸಬಹುದು.

	ಟ್ರೈಪನೋಸೋಮಿಯಾಸಿಸ್ (ನಿದ್ರಾರೋಗ) : ಆಫ್ರಿಕದಲ್ಲಿ ಕಂಡು ಬರುತ್ತದೆ ಟ್ರೈಪನೊಸೋಮ ಗ್ಯಾಂಬಿಯಾನ್ಸಿ ಮತ್ತು ಟ್ರೈಪನೊಸೋವರೂಡಿಸಿಯೆನ್ಸಿ ಎಂಬ ಪರೋಪಜೀವಿಗಳಿಂದ ಉಂಟಾಗುತ್ತದೆ. ಗ್ಲಾಸೈನಾ ಜಾತಿಗೆ ಸೇರಿದ ಟ್ಸೆಟ್ಸೆನೊಣಗಳು ಇದನ್ನು ಹರಡುತ್ತವೆ. ಇವು ಮನುಷ್ಯನನ್ನು ಕಡಿದಾಗ ಆ ಸ್ಥಳ ನೋಯುತ್ತದೆ. ಅಲ್ಲಿ ಇವು ಕ್ರಿಮಿಗಳನ್ನು ಒಳಬಿಟ್ಟರೆ ಆ ಸ್ಥಳ ಹತ್ತು ದಿವಸಗಳ ಬಳಿಕ ಮೇಲೆ ಊದಿಕೊಂಡು ಪುನಃ ನೋವು ಉಂಟಾಗುತ್ತದೆ. ಎರಡು ಮೂರು ವಾರಗಳಲ್ಲಿ ಟ್ರೈಪನೊಸೋಮ ಕ್ರಿಮಿಗಳು ರಕ್ತವನ್ನು ಸೇರುತ್ತವೆ. ಆಕ್ರಮ ಬರುವ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಲಂಬನ ಇವನ್ನು ಒಳಗೊಂಡು ಕಾಯಿಲೆ ನಿಧಾನವಾಗಿ ಸಾಗುತ್ತದೆ. ಜ್ವರ ಒಂದು ವಾರವಿದ್ದು ಬಿಟ್ಟು ಪುನಃ ಬರುತ್ತದೆ. ಹೀಗೆ ತಿಂಗಳುಗಟ್ಟಲೆ ಸಾಗುತ್ತದೆ. ಗುಲ್ಮ ಮತ್ತು ಯಕೃತ್ತು ದೊಡ್ಡದಾಗುತ್ತವೆ. ಚರ್ಮದ ಮೇಲೆ ಗುಳ್ಳೆಗಳೂ ಕೆಲವು ತಿಂಗಳ ಮೇಲೆ ನರಮಂಡಲದ ರೋಗ ಚಿಹ್ನೆಗಳೂ ಕಾಣಿಸಿಕೊಳ್ಳುತ್ತವೆ, ತಲೆನೋವು, ಸ್ವಭಾವದಲ್ಲಿ ಬದಲಾವಣೆ, ರಾತ್ರಿಯಲ್ಲಿ ನಿದ್ರೆಬಾರದಿರುವುದು ಮತ್ತು ಹಗಲಿನಲ್ಲಿ ನಿದ್ರೆ ಬರುವುದು, ಮನಸ್ಸಿನ ಅಸ್ತವ್ಯಸ್ತತೆ, ಅದಿರಾಟ, ಜೋಗರಿಕೆ, ಸೊರಗಾಣಿಕೆ, ಮಯಕ ಉಂಟಾಗಿ ಕಡೆಗೆ ಸಾವುಂಟಾಗುತ್ತದೆ. ಟ್ರಿ, ರೂಡಿಸಿಯನ್ಸಿಸ್ ಸೋಂಕಿನಲ್ಲಿ ಜ್ವರ ಜಾಸ್ತಿ ಇರುತ್ತದೆ ಮತ್ತು ಕೆಲವು ವಾರದಲ್ಲೇ ಕಾಯಿಲೆ ತೀವ್ರವಾಗುತ್ತದೆ ಗುಂಡಿಗೆ ಸೋಲುವೆಯಿಂದಲೋ ಸಾಯಬಹುದು.ರೋಗ ತೀವ್ರವಾಗಿಲ್ಲದಾಗ ಅದಿರು ರೋಗ, ತೂಕಡಿಕೆ ಮತ್ತು ಮಯಕ ಉಂಟಾಗಬಹುದು. ರಕ್ತದ ಸವರನ್ನು ಸೂಕ್ಷ್ಮದರ್ಶಕದಿಂದ ನೋಡಿದಾಗ ಪರೋಪಜೀವಿ ಕಾಣಿಸಬಹುದು. ದುಗ್ಧರಸ ಗ್ರಂಥಿಗಳನ್ನು ಸೂಜಿಯಿಂದ ಚುಚ್ಚಿ ಪರೀಕ್ಷಿಸಿದಾಗ ಅಥವಾ ಎಲುಬಿನ ಮಜ್ಜೆಯ ಸವರನ್ನು ಪರೀಕ್ಷಿಸಿದಾಗ ಪರೋಪಜೀವಿಗಳು ಕಾಣಿಸಬಹುದು.

	ಷಾಗನ ಕಾಯಿಲೆ : ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಈ ಕಾಯಿಲೆಗೆ ಕಾರಣ ಟ್ರಿಪಾನೊಸೋಮಕ್ರುಸಿ, ರೆಡುವಿಡಿತಗಣಿಯ ಮಲದಲ್ಲಿರುವ ಪರೋಪಜೀವಿಗಳು ಮನುಷ್ಯನ ದೇಹವನ್ನು ಕಣ್ಣಿನಮೇಲುಪೊರೆ, ಬಾಯಿ ಅಥವಾ ಮೂಗಿನ ಲೋಳೆಪೊರೆ ಅಥವಾ ಚರ್ಮದ ಗೀರುಗಾಯದ ಮೂಲಕ ಪ್ರವೇಶಿಸಿದ ಗಾಯದಲ್ಲಿ ಕೆಂಪುಗಡ್ಡೆ ಆಗಿ ಸ್ಥಳೀಯ ದುಗ್ಧರಸ ಗ್ರಂಥಿಗಳು ದೊಡ್ಡವಾಗುತ್ತವೆ. ಕಣ್ಣಿನಮೇಲುಪೊರೆ ಮೂಲಕ ಪ್ರವೇಶಿಸಿದಾಗ ಒಂದು ಕಣ್ಣಿನಲ್ಲಿ ಮೇಲುಪೊರೆ ಊದಿಕೊಂಡು ಕೆಂಪಾಗಿ ಕಣ್ಣು ತೆರೆಯಲು ಬಾರದಿರಬಹುದು (ರೊಮಾನಾ ಚಿಹ್ನೆ). ಈ ಕಾಯಿಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜ್ವರ, ವೇಗಗುಂಡಿಗೆ, ದುಗ್ಧರಸ ಗ್ರಂಥಿಗಳು, ಯಕೃತ್ತು ಮತ್ತು ಗುಲ್ಮ ದೊಡ್ಡವಾಗುವುದು ಇದರ ಲಕ್ಷಣಗಳು, ನರಮಂಡಲದ ರೋಗಚಿಹ್ನೆಗಳು ಉಂಟಾಗಬಹುದು. ನಿದ್ರೆ ಬಾರದಿರುವಿಕೆ, ಸ್ವಭಾವದಲ್ಲಿ ಬದಲಾವಣೆ, ಮೆನಿನ್‍ಜೈಟಿಸ್ ಮತ್ತು ಎನ್‍ಕೆಫಲೈಟಿಸ್ ರೋಗ ಚಿಹ್ನೆಗಳು ಕಾಣಿಸಬಹುದು. ಗುಂಡಿಗೆ ಸ್ನಾಯುವಿನ ಆಕ್ರಮಣದಿಂದ ಗುಂಡಿಗೆ ಸ್ನಾಯು ಬೇನೆ ಉಂಟಾಗಬಹುದು.

	ಬಾಲನ್‍ಟಿಡಿಯಾಸಿಸ್ : ಬಾಲನ್‍ಟಿಡಿಯಮ್ ಕೊಲೈ ಎಂಬ ದೊಡ್ಡ ಲೋಮಾಂಗಧಾರಿಯಾದ ಪರೋಪಜೀವಿಯಿಂದ ಬರುವ ರೋಗ, ಇದರ ಸೋಂಕು ಪ್ರಪಂಚವ್ಯಾಪ್ತಿ ಉಳ್ಳದ್ದು. ಬ್ಯಾ. ಕೋಲೈ ಸಾಮಾನ್ಯವಾಗಿ ಹಂದಿಗಳಲ್ಲಿ ಮತ್ತು ಅಪರೂಪಕ್ಕೆ ಮನುಷ್ಯರಲ್ಲಿ ಕಾಣಿಸುತ್ತದೆ ರೋಗಲಕ್ಷಣಗಳಲ್ಲಿ ಇದು ಅಮೀಬ ಆಮಶಂಕೆಯನ್ನು ಹೋಲುತ್ತದೆ. ಬ್ಯಾ. ಕೊಲೈ ವಾಸ ಕರುಳಿನಲ್ಲಿ, ದೊಡ್ಡ ಕರುಳಿನಲ್ಲಿ ಹುಣ್ಣುಗಳನ್ನು ಉಂಟುಮಾಡಬಹುದು. ಈ ರೋಗದಲ್ಲಿ ಏನೂ ರೋಗ ಚಿಹ್ನೆಗಳಿಲ್ಲದಿರಬಹುದು ಅಥವಾ ರಕ್ತ, ಆಮುಗಳಿಂದ ಕೂಡಿದ ಭೇದಿ ಅನೇಕ ಸಲ ಉಂಟಾಗಬಹುದು. ಮಲವನ್ನು ಸೂಕ್ಷ್ಮದರ್ಶಕದಿಂದ ನೋಡಿದಾಗ ಪರೋಪಜೀವಿಗಳು ಕಾಣಿಸಬಹುದು.

	ಗಿಯಾರ್ಡಿಯಾಸಿಸ್ : 12-18 ಮೈಕ್ರಾನುಗಳಷ್ಟು ಉದ್ದವಿರುವ ಚಬುಕಾಂಗಿಯಾದ ಗಿಯಾರ್ಡಿಯಾ ಇಂಟೆಸ್ಟೈನಾಲಿಸ್ ಎಂಬ ಏಕಾಣುಜೀವಿಯಿಂದ ಈ ಕಾಯಿಲೆ ಉಂಟಾಗುತ್ತದೆ. ಈ ಸೋಂಕು ಪ್ರಪಂZವ್ಯಾಪಿಯಾಗಿದ್ದರೂ ಉಷ್ಣವಲಯದಲ್ಲಿ ಜಾಸ್ತಿ. ಯಾವ ರೋಗಚಿಹ್ನೆಗಳೂ ಇಲ್ಲದಿರಬಹುದು. ತೀವ್ರರೂಪದ ಅತಿಭೇದಿ ಉಂಟಾಗಬಹುದು. ಮಲ ತೆಳ್ಳಗೂ ಬೆಳ್ಳಗೂ ಇರುತ್ತದೆ. ಸೋಂಕು ಜಾಸ್ತಿಯಿದ್ದಾಗ ಆಹಾರ ರಕ್ತತಗವಾಗುವುದಕ್ಕೆ ಧಕ್ಕೆ ಆಗಿರಬಹುದು. ಪರಪಿಂಡಿಗಳನ್ನೂ ಅವುಗಳ ಜಿಟ್ಟೆಗಳನ್ನೂ ಮಲದಲ್ಲಿ ನೋಡುವುದರ ಮೂಲಕ ಕಾಯಿಲೆಯನ್ನು ಕಂಡುಹಿಡಿಯಬಹುದು.

	ಚಪ್ಪಟೆ ಕ್ರಿಮಿಗಳ ರೋಗಗಳು. ಶಿಸ್ಟೊಸೋಮಿಯಾಸಿಸ್ (ಬಸವನ ಹುಳು ಜ್ವರ) : ಚಪ್ಪಟೆಕ್ರಿಮಿಯ ಜಾತಿಗೆ ಸೇರಿದ ಶಿಷ್ಟೊಸೋಮ ಎಂಬ ವರ್ಗದ ಪರೋಪಜೀವಿಯಿಂದ ಈ ರೋಗ ಉಂಟಾಗುತ್ತದೆ. ಈ ವರ್ಗದ ಮೂರು ಬಗೆ ಕ್ರಿಮಿಗಳು ರೋಗಕಾರಕಗಳು. ಶಿಸ್ಟೊಸೋಮ ಹೆಮಟೋಬಿಯಮ್ ಮಧ್ಯಮ ಮತ್ತು ಉತ್ತರ ಆಫ್ರಿಕ ಭಾಗಗಳಲ್ಲಿಯೂ ಶಿಸ್ಟೊಸೋಮಮ್ಯಾನ್‍ಸೋನಿ ಆಫ್ರಿಕ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿಯೂ ಶಿಸ್ಟೊಸೋಮ ಜಪಾನ್ ಕಮ್ ದೂರ ಪ್ರಾಚ್ಯದೇಶಗಳಲ್ಲಿಯೂ ಕಂಡುಬರುತ್ತವೆ. ಶಿಸ್ಟೊಸೋಮ ಹೆಮಟೋಬಿಯಮ್ ತಳಿಗೆ ಸೇರಿದ ಬಲಿತ ಕ್ರಿಮಿ ಯಕೃತ್ತಿನ ಪೋರ್ಟಲ್ ಅಭಿಧಮನಿಗಳಲ್ಲೂ ಮೂತ್ರಕೋಶದ. ಗರ್ಭಕೋಶದ ಮತ್ತು ಗುದನಾಳದ ರಕ್ತನಾಳಗಳಲ್ಲಿಯೂ ವಾಸಿಸುತ್ತದೆ. ಇದು ಹಿಂತುದಿಯಲ್ಲಿ ಮುಳ್ಳಿರುವ ಮೊಟ್ಟೆ ಇಡುತ್ತದೆ. ಇವು ಮೂತ್ರದಲ್ಲಿ ಹೊರಬೀಳುತ್ತವೆ. ಶಿಸ್ಟೊಸೋಮಮ್ಯಾನ್‍ಸೋನಿ ಪಕ್ಕದಲ್ಲಿ ಮುಳ್ಳಿರುವ ಮೊಟ್ಟೆ ಇಡುತ್ತದೆ. ಈ ಮೊಟ್ಟೆಗಳಿಂದ ಉಂಟಾಗುವ ಉರಿ ಉದ್ರೇಕವೇ ಪ್ರಾರಂಭದ ರೋಗಚಿಹ್ನೆ. ಮೊಟ್ಟೆ ನೀರನ್ನು ತಲಪಿದಾಗ ಒಡೆದು ಮರಿಯಾಗುತ್ತದೆ. ಇದು (ಮಿರಾಸಿಡಿಯಮ್) ಚೆನ್ನಾಗಿ ಈಜುತ್ತ ಮಧ್ಯಸ್ಥ ಅತಿಥೇಯವಾದ ಸಿಹಿನೀರಿನ ಬಸವನಹುಳುವಿನ ಶರೀರವನ್ನು ಪ್ರವೇಶಿಸುತ್ತದೆ. ಅಲ್ಲಿ ಇದು ಸ್ಪೋರೊಸಿಸ್ಟ್ ಆಗಿ ಮಾರ್ಪಡುತ್ತದೆ. ಸ್ಪೋರೊಸಿಸ್ಟಿನಲ್ಲಿ ಎರಡನೆಯ ಸಂತತಿಯ ಸ್ಪೋರೊಸಿಸ್ಟುಗಳು ಉದ್ಭವಿಸಿ ಇವುಗಳಿಂದ ದ್ವಿಕಾಂಡ ಬಾಲವುಳ್ಳ ಸರ್ಕೇರಿಯಾ ಎಂಬ ಹೆಸರಿನ ಮರಿ ಉತ್ಪತ್ತಿಯಾಗುತ್ತದೆ. ಸರ್ಕೇರಿಯಗಳು ಸ್ಪೋರೊಸಿಸ್ಟುಗಳಿಂದ ಬಿಡುಗಡೆ ಹೊಂದಿ ಬಸವನ ಹುಳುವಿನಿಂದ ಹೊರಗೆ ಬಂದು ನೀರಿನಲ್ಲಿ ಈಜಾಡುತ್ತಿರುತ್ತವೆ. ಸುಮಾರು 48 ಗಂಟೆಗಳ ಕಾಲ ಇವು ನೀರಿನಲ್ಲಿ ಜೀವಿಸಿರಬಹುದು. ಈ ಅವಧಿಯಲ್ಲಿ ಚರ್ಮದ ಮೂಲಕ ಅಥವಾ ಬಾಯಿಯ ಲೋಳೆಪೊರೆಯ ಮೂಲಕ ಮನುಷ್ಯನ ಶರೀರವನ್ನು ಸೇರುತ್ತವೆ. ರಕ್ತಪರಿಚಲನೆಯ ಮೂಲಕವೂ ಮತ್ತು ಫುಫ್ಪುಸಗಳ ಮೂಲಕ ಯಾಕೃತ್ತನ್ನು ಸೇರಿ ಸುಮಾರು ಎರಡು ತಿಂಗಳಲ್ಲಿ ಗಂಡು ಹೆಣ್ಣು ಜೋಡಿಯಾಗಿ ಹೆಣ್ಣುಹುಳು ಮುಳ್ಳಿರುವ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ.

	ಮೂರು ತಿಂಗಳುಗಳಲ್ಲಿ ಪಕ್ವಾವಸ್ಥೆ ತಲಪಿದ ಶಿಸ್ಟೊಸೊಮ ಹೆಮಟೋಬಿಯಮಿನಿಂದ ಉಂಟಾಗುವ ರೋಗದಲ್ಲಿ ರಕ್ತಮೂತ್ರ, ಅತಿಮೂತ್ರ, ಮೂತ್ರ ವಿಸರ್ಜನೆ ವೇಳೆ ವೇದನೆ ಮುಂತಾದವು ತಲೆದೋರುತ್ತವೆ. ಈ ಲಕ್ಷಣಗಳು ಬಲುದಿನಗಳ ತನಕವೂ ಇರಬಹುದು. ಶಿಸ್ಟೊಸೋಮ ಮ್ಯಾನ್‍ಸೋನಿ ಸೋಂಕಿನಲ್ಲಿ ಪಕ್ವಾವಸ್ಥೆ ಎರಡು ತಿಂಗಳು ಆದ ಬಳಿಕ ಕೆಮ್ಮು, ತಲೆನೋವು, ಚಳಿಜ್ವರ, ಹೊಟ್ಟೆನೋವು ಉಂಟಾಗಬಹುದು. ಗುಲ್ಮವೂ ಯಾಕೃತ್ತೂ ದೊಡ್ಡದಾಗಿ ರಕ್ತ ಮತ್ತು ಆಮಿನಿಂದ ಕೂಡಿದ ಭೇದಿ ತಲೆದೋರಬಹದು. ಚರ್ಮದ ಮೇಲೆ ಗುಳ್ಳೆಗಳು ಮತ್ತು ತುರುಚಿಕೆ ದದ್ದು ಉಂಟಾಗಬಹುದು. ರಕ್ತದಲ್ಲಿ ಇಯೊಸಿನೊಫಿಲ್ಸ ಜಾಸ್ತಿಯಾಗಬಹುದು. ಸಿರ್ರೋಸಿಸ್ (ಯಕೃತ್ತಿನ ರೋಗ) ಮತ್ತು ಜಲೋದರ ಉಂಟಾಗಬಹುದು. ಶಿಸ್ಟೊಸೋಮ ಜಪಾನಿಕಮಿನಿಂದ ಉಂಟಾಗುವ ರೋಗದಲ್ಲಿ ರೋಗಲಕ್ಷಣಗಳು ಶಿಸ್ಟೊಸೋಮ ಮ್ಯಾನ್‍ಸೋನಿ ಕಾಯಿಲೆಯನ್ನು ಹೋಲುತ್ತವೆ. ಇದರ ಜೊತೆಗೆ ನರಮಂಡಲರೋಗ ಲಕ್ಷಣಗಳು, ಸೆಳವುರೋಗ, ಅರೆಜೋಗರಿಕೆ ಕ್ರೇನಿಯಲ್ ನರಗಳನ್ನು ದೌರ್ಬಲ್ಯ ಅಥವಾ ಮಯಕ ಉಂಟಾಗಬಹುದು. ಮೊಟ್ಟೆಗಳನ್ನು ಮೂತ್ರಕೋಶದಲ್ಲಿ ಅಥವಾ ಮಲದಲ್ಲಿ ಗುರುತಿಸಿ ರೋಗವನ್ನು ಪತ್ತೆ ಹಚ್ಚಬಹುದು.

	ಕ್ಲೋನಾರ್‍ಕಿಯಾಸಿಸ್ : ಕ್ಲೊನಾರ್‍ಕಿಸ್ ಸೈನೆನ್‍ಸಿಸ್ ಎಂಬ ಚಪ್ಪಟೆ ಹುಳು ಜಾತಿಗೆ ಸೇರಿದ ಹುಳುವಿನಿಂದ ಬರುವ ರೋಗ. ಪಿತ್ತನಾಳಗಳಲ್ಲಿ ಈ ಹುಳುವಿನವಾಸ. ಚಪ್ಪಟೆಯಾಗಿ 4 ಸೆಂ.ಮೀ ಉದ್ದವಿದ್ದು ಬಹಳಷ್ಟು ಮೊಟ್ಟೆ ಇಡುತ್ತದೆ. ಮಲದಲ್ಲಿ ವಿಸರ್ಜಿಸಲ್ಪಡುವ ಮೊಟ್ಟೆಗಳು ಬಸವನ ಹುಳುವಿನ ಶರೀರವನ್ನು ಸೇರಿ ಸರ್ಕೇರಿಯ ಎಂಬ ಮರಿಗಳಾಗಿ ಮಾರ್ಪಾಡುಗೊಂಡು ಅವುಗಳಿಂದ ಬಿಡುಗಡೆಯಾಗಿ ನೀರನ್ನು ತಲಪಿ ಮೀನಿನ ದೇಹವನ್ನು ಪ್ರವೇಶಿಸುತ್ತವೆ. ಚೆನ್ನಾಗಿ ಬೇಯಿಸದ ಮೀನನ್ನು ತಿಂದಾಗ ಮನುಷ್ಯನಿಗೆ ಸೋಂಕು ಉಂಟಾಗುತ್ತದೆ. ಈ ಕಾಯಿಲೆ ಮುಖ್ಯವಾಗಿ ಚೈನಾ, ಕೊರಿಯಾ, ಟೈವಾನ ಮತ್ತು ಜಪಾನ್ ದೇಶಗಳಲ್ಲಿ ಕಂಡುಬರುತ್ತದೆ. ಅನೇಕ ಸಲ ಯಾವ ರೋಗಚಿಹ್ನೆಗಳೂ ಇರುವುದಿಲ್ಲ. ಹೊಟ್ಟೆ ನೋವು, ಆಗಾಗ್ಗೆ ಬರುವ ಜ್ವರ ಮತ್ತು ಕಾಮಾಲೆ ಉಂಟಾಗಬಹುದು.

	ಪ್ಯಾರಗೋನಿಮಿಯಾಸಿಸ್ : ಚಪ್ಪಟೆಹುಳುವಿನ ಜಾತಿಗೆ ಸೇರಿದ ಪ್ಯಾರಗೋನಿಮಸ್ ಎಂಬ ಕ್ರಿಮಿಯಿಂದ ಉಂಟಾಗುವ ರೋಗ. ಸಾಮಾನ್ಯವಾಗಿ ಪ್ಯಾ. ವೆಸ್ಟರ್‍ಮಾನಿಯಿಂದ ಈ ರೋಗ ಉಂಟಾಗುತ್ತದೆ. ದೊಡ್ಡಹುಳು ಫುಫ್ಪುಸಗಳಲ್ಲಿ ಜಿಟ್ಟಿಯರೂಪದಲ್ಲಿ ವಾಸಿಸುತ್ತದೆ. ಜಿಟ್ಟಿಗಳು ಒಡೆದಾಗ ಮೊಟ್ಟೆಗಳು ಕಫದಲ್ಲೂ ಕಫವನ್ನು ನುಂಗಿದಾದರೆ ಮಲದಲ್ಲು ವಿಸರ್ಜಿಸಲ್ಪಡುತ್ತವೆ. ಮೊಟ್ಟಯೊಡೆದು ಮರಿಗಳಾಗಿ ನೀರನ್ನು ಸೇರಿ ಮೊದಲೆನೆಯ ಮಧ್ಯಸ್ಥ ಅಥಿಥೇಯವಾದ ಬಸವನ ಹುಳವಿನ ಶರೀರವನ್ನು ಸೇರುತ್ತವೆ. ಇದರ ಶರೀರದಿಂದ ಹೊರಬಂದ ಮರಿಗಳು ಏಡಿ ಮತ್ತು ಕ್ರೇಮೀನುಗಳು ಶರೀರವನ್ನು ಸೇರುತ್ತವೆ. ಚೆನ್ನಾಗಿ ಬೇಯಿಸದೆ ಈ ಪ್ರಾಣಿಗಳ ಮಾಂಸ ತಿಂದಾಗ ಮನುಷ್ಯನಿಗೆ ಸೋಂಕು ಉಂಟಾಗುತ್ತದೆ. ಈ ರೋಗ ಸಾಮಾನ್ಯವಾಗಿ ದಕ್ಷಿಣ ಅಮೆರಿಕ, ಅತಿಪೂರ್ವ ಪ್ರಾಚ್ಯ, ಸೋಮಾಲಿಯ ಮತ್ತು ಭಾರತದೇಶಗಳಲ್ಲಿ ಕಂಡುಬರುತ್ತದೆ. ಶರುವಿಗೆ ಜ್ವರ, ಕೆಮ್ಮು ಮತ್ತು ರಕ್ತ ಮಿಶ್ರಿತ ಕಫ ಇರುತ್ತವೆ. ಅಪರೂಪವಾಗಿ ಎದೆನೋವು ಉಂಟಾಗಿ ಕೆಮ್ಮಿದಾಗ ರಕ್ತ ಬೀಳುವುದುಂಟು. ರೋಗಲಕ್ಷಣಗಳು ಫುಫ್ಪುಸದ ಉರಿತ ಮತ್ತು ಕ್ಷಯರೋಗದ ಲಕ್ಷಣಗಳನ್ನು ಹೋಲಬಹುದು. ಪರೋಪಜೀವಿ ಹೊಟ್ಟೆಯಲ್ಲಿ ಇದ್ದಾಗ ಭೇದಿ ಮತ್ತು ಯಕೃತ್ತು ಉರಿತದ ಚಿಹ್ನೆಗಳು ಉಂಟಾಗಬಹುದು. ನರಮಂಡಲದ ರೋಗಚಿಹ್ನೆಗಳೂ ಉಂಟಾಗಬಹುದು. ಬಲಿತ ಹುಳುಗಳು 20 ವರ್µಗಳ ತನಕ ಜೀವಿಸಬಲ್ಲವು.

	ಫ್ಯಾಸಿಯೋಲಿಯಾಸಿಸ್ : ಫ್ಯಾಸಿಯೋಲಾ ಹೆಪಾಟಿಕಾ ಪರೋಪಜೀವಿ ಸಾಮಾನ್ಯವಾಗಿ ಕುರಿಯನ್ನು ಆಶ್ರಯಿಸುತ್ತದೆ. ಅಪರೂಪವಾಗಿ ಮನುಷ್ಯನಿಗೆ ಇದರ ಸೋಂಕು ತಾಗುತ್ತದೆ. ಬಲಿತ ಹುಳುಗಳು ಪಿತ್ತನಾಳಗಳಲ್ಲಿ ವಾಸಿಸುತ್ತವೆ. ಎಲೆಯಾಕಾರ. ಉದ್ದ 3 ಸೆಂಮೀ. ಮೊಟ್ಟೆಗಳು ಕುರಿಯ ಮಲದಲ್ಲಿ ವಿಸರ್ಜಿಸಲ್ಪಡುತ್ತವೆ. ನೀರಿನಲ್ಲಿ ಮೊಟ್ಟೆಗಳಿಂದ ಮಿರಾಸಿಡಿಯಮ್ ಎಂಬ ಘಟ್ಟದ ಮರಿ ಬಿಡುಗಡೆಗೊಂಡು ಲೇಮ್ನಿಯೆಂಬ ಬಸವನ ಹುಳುವಿನ ಶರೀರವನ್ನು ಪ್ರವೇಶಿಸುತ್ತದೆ. ಅದರಿಂದ ಸರ್ಕೇರಿಯಾ ಘಟ್ಟದ ಮರಿಗಳು ಹುಟ್ಟಿ ಬಿಡುಗಡೆಗೊಂಡು ನೀರಿನಲ್ಲಿ ಈಜಾಡುತ್ತಿರುತ್ತವೆ. ಇವುಗಳಿಗೆ ನೀರಿನಲ್ಲಿ ಬೆಳೆಯುವ ಸಸ್ಯಗಳ ಆಸರೆ ದೊರೆತಲ್ಲಿ ಕೋಶಾವರನ ಹೊಂದಿ ಮೆಟಸರ್ಕೇರಿಯಾಗಳಾಗಿ ರೂಪಾಂತರ ಹೊಂದುತ್ತವೆ. ಮನುಷ್ಯ ಅಥವಾ ಕುರಿ ಮತ್ತು ದನ ಮುಂತಾದ ಪ್ರಾಣಿಗಳು ಮೆಟಸರ್ಕೇರಿಯಾಗಳನ್ನು ಅಕಸ್ಮಾತ್ ನುಂಗಿದಾಗ ಅವು ಮುಂಗುರುಳನ್ನು ತಲಪಿ ಅಲ್ಲಿ ಕೋಶಾವರಣದಿಂದ ಬಿಡುಗಡೆ ಹೊಂದುತ್ತವೆ. ಮೆಟಸರ್ಕೇರಿಯಾಗಳು ಕರುಳಿನ ಗೋಡೆಯನ್ನು ಭೇದಿಸಕೊಂಡು ಪೆರಿಟೋನಿಯಮ್ ಕೋಶ ಮತ್ತು ಯಕೃತ್ತನ್ನು ಸೇರಿ ಪಿತ್ತನಾಳಗಳಲ್ಲಿ ವೃದ್ಧಿಹೊಂದುತ್ತವೆ. ಮನುಷ್ಯನ ಸೋಂಕು ಸಾಮಾನ್ಯವಾಗಿ ಉತ್ತರ ಆಫ್ರಿಕ, ಅಪರೂಪವಾಗಿ ಬ್ರಿಟಿಷ್ ದೇಶಗಳಲ್ಲಿ ಕಂಡುಬರುತ್ತದೆ. ಸಣ್ಣ ಜ್ವರ, ಯಕೃತ್ತು ದೊಡ್ಡದಾಗುವುದು ಮತ್ತು ರಕ್ತದಲ್ಲಿ ಇಯೊಸಿನೋಫಿಲ್ಸ್ ಬಿಳಿಯ ರಕ್ತಕಣಗಳ ಸಂಖ್ಯೆ ಜಾಸ್ತಿಯಾಗುವುದು ಉಂಟಾಗಬಹುದು. ಹೊಟ್ಟೆ ನೋವು, ಭೇದಿ ಮತ್ತು ಜೀವಿವಿಷರಕ್ತದ ಚಿಹ್ನೆಗಳು ತಲೆದೋರಬಹುದು.

	ಪ್ಯಾಸಿಯೋಲಾಪ್ಸಿಯಾಸಿಸ್ : ಈ ರೋಗವನ್ನು ಉಂಟುಮಾಡುವ ಪ್ಯಾಸಿಯೋಲಾಪ್ಸಿಸ್ ಬಸ್ಕಿ ಮನುಷ್ಯನಿಗೆ ಸೋಂಕು ಉಂಟುಮಾಡುವ ಚಪ್ಪಟೆ ಕ್ರಿಮಿಗಳಲೆಲ್ಲ ದೊಡ್ಡದು. ಬಲಿತಹುಳು ಮನುಷ್ಯ, ಹಂದಿ, ಅಪರೂಪಕ್ಕೆ ನಾಯಿಯ ಕರುಳಲ್ಲಿ ವಾಸಿಸುತ್ತದೆ. ಮೊಟ್ಟೆಗಳು ಮಲದಲ್ಲಿ ಹೊರಬೀಳುತ್ತವೆ. ನೀರಿನಲ್ಲಿ ಮಿರಾಸಿಡಿಯುಮುಗಳು ಬಿಡುಗಡೆ ಹೊಂದಿ ಸೆಗ್‍ಮೆಂಟೈನಾ ತಳಿಗೆ ಸೇರಿದ ಬಸವನಹುಳುವಿನ ಶರೀರವನ್ನು ಪ್ರವೇಶಿಸಿ ಅದರಿಂದ ಕರ್ಕೇರಿಯಾಗಳು ಬಿಡುಗಡೆಗೊಂಡು ನೀರಿನಲ್ಲಿ ಈಜುತ್ತ ಅಲ್ಲಿ ಸಸ್ಯಗಳ ಆಸರೆ ಸಿಕ್ಕದಾಗ ಕೋಶಾವರಣ ಹೊಂದುತ್ತವೆ. ಈ ಮೆಟಸರ್ಕೇರಿಯಾಗಳನ್ನು ಮನುಷ್ಯ ಅಕಸ್ಮಾತ್ ನುಂಗಿದಾಗ ಸೋಂಕು ಉಂಟಾಗುತ್ತದೆ. ಇವು ರೋಗ ಮಧ್ಯ ಮತ್ತು ದಕ್ಷಿಣ ಚೀನಾದಲ್ಲಿ ಕಂಡು ಬರುತ್ತದೆ. ಮೊದಲಿಗೆ ಮೇಲುಹೊಟ್ಟೆನೋವು ತಲೆದೋರಿ ಸ್ವಲ್ಪದಿವಸ ಮೇಲೆ ಜೀರ್ಣವಾಗದ ಆಹಾರ ಸಹಿತವಾದ ಭೇದಿ ಮತ್ತು ಕೈಕಾಲುಗಳ ಊತ ಕಂಡುಬರುಬಹುದು.

	ಸೆಸ್ಟಾಯ್ಡಿಯ : ಇವು ಲಾಡಿ ಹುಳುಗಳು. ಪ್ಲಾಟಿಹೆಲ್ಮಿಸ್ ಜಾತಿಗೆ ಮತ್ತು ಸೆಸ್ಟಾಯ್ಡಿಯ ವರ್ಗಕ್ಕೆ ಸೇರಿವೆ. ಆಕಾರಪಟ್ಟೆಯಂತೆ. ಮನುಷ್ಯನ ಕರುಳಿನಲ್ಲಿ ವಾಸ. ಇವಕ್ಕೆ ಪ್ರತ್ಯೇಕ ಜೀರ್ಣಾಂಗಗಳಿಲ್ಲ. ಆಹಾರವನ್ನು ಹೊರಮೈ ಮೂಲಕ ಹೀರಿಕೊಳ್ಳುತ್ತವೆ. ಆತಿಥೇಯದ ಕರುಳಿನಲ್ಲಿ ತಗಲಿಕೊಳ್ಳಲು ಅನುವಾಗುವಂತೆ ಇದರ ಮುಂದಿನ ಭಾಗದಲ್ಲಿರುವ ಕೊಕ್ಕೆಯುಕ್ತತಲೆಯಲ್ಲಿ (ಸ್ಕೊಲೆಕ್ಸ್) ಹೀರುಕಗಳಿವೆ. ಕೊಕ್ಕೆತಲೆ ಅಥವಾ ಶಿರ ಆದಮೇಲೆ ಸೂಕ್ಷ್ಮವಾದ ಕೊರಳಿದ್ದು ಅನಂತರ ಪಟ್ಟೆಯಂತಿರುವ ಪ್ರೊಗ್ಲಾಟೆಡುಗಳೆಂಬ ತುಂಡು ಲಾಡಿಗಳ ಸರಣಿ ಇದೆ. ಸರಣಿಯ ಮೊದಲಲ್ಲಿ ಎಳಸು ತುಂಡುಲಾಡಿಗಳೂ ತರುವಾಯ ಜನನಾಂಗಗಳುಳ್ಳ ಬಲಿತ ತುಂಡು ಲಾಡಿಗಳೂ ಕೊನೆಯಲ್ಲಿ ಮೊಟ್ಟೆಗಳಿಂದ ತುಂಬಿದ ತುಂಡುಲಾಡಿಗಳು ಇವೆ. ಪ್ರೊಗ್ಲಾಟಿಡುಗಳ ಸಂಖ್ಯೆ ಒಂದುಪ್ರಭೇದದಲ್ಲಿ ನಾಲ್ಕರಿಂದ ಐದು ಸಾವಿರವಾದರೆ ಇನ್ನೊಂದರಲ್ಲಿ ಮೂರರಿಂದ ನಾಲ್ಕು ಸಾವಿರವಿರಬಹುದು. ಲಾಡಿಹುಳುಗಳು ಉಭಯಲಿಂಗಿಗಳು. ಪ್ರತಿಪ್ರೋಗ್ಲಾಟಿನಲ್ಲಿಯೂ ಪುಂಸ್ತ್ರೀ ಜನನಾಂಗಗಳೆರಡೂ ಉಂಟು. ಮೊಟ್ಟೆ ತುಂಬಿರುವ ತುಂಡುಲಾಡಿಗಳು ಮಲದಲ್ಲಿ ವಿಸರ್ಜಿತವಾಗುತ್ತಿರುತ್ತವೆ. ಇವನ್ನು ಮಧ್ಯಸ್ಥ ಆತಿಥೇಯ ಸೇವಿಸಿದಾಗ ಸೋಂಕು ಹತ್ತಿ ಅದಕ್ಕೆ ಮೊಟ್ಟೆಗಳಿಂದ ಮರಿಗಳಾಗುತ್ತವೆ. ಇವಕ್ಕೆ ಸಿಸ್ಟಿಸರ್ಕಸುಗಳೆಂದು ಹೆಸರು. ಇವು ಮಧ್ಯಸ್ಥ ಆತಿಥೇಯದ ಊತಕಗಳಲ್ಲಿ, ಮುಖ್ಯವಾಗಿ ಸ್ನಾಯುಗಳಲ್ಲಿ, ನೆಲಸುತ್ತವೆ. ಹೀಗೆ ಸೋಂಕು ಹತ್ತಿದ ಮತ್ತು ಚೆನ್ನಾಗಿ ಬೇಯಿಸದೆ. ಸಿಸ್ಟಿಸರ್ಕಸ್ ಬೋವಿಸ್ ಇರುವ ದನದ ಮಾಂಸವನ್ನು ತಿಂದಾಗ ಟೀನಿಯಾ ಸಾಜಿನೇಟಾ ಎಂಬ ಲಾಡಿ ಹುಳುವಿನ ರೋಗವೂ ಸಿಸ್ಟಿಸರ್ಕಸ್ ಸೆಲ್ಯುಲೋಸ್ ಇರುವ ಹಂದಿಯ ಮಾಂಸವನ್ನು ತಿಂದಾಗ ಟೀನಿಯಾ ಸೋಲಿಯಮ್ ಎಂಬ ಲಾಡಿಹುಳುವಿನ ರೋಗವೂ ಚೆನ್ನಾಗಿ ಬೇಯಿಸದೇ ಇರುವ ಮೀನಿನ ಲಾಡಿಹುಳುವಿನ ಮರಿಯ ಸೋಂಕು ಹತ್ತಿದ ಮೀನನ್ನು ತಿಂದಾಗ ಡೈಫಿಲೊಬ್ರಾಥ್ರಿಯಲೆಟಮ್ ಎಂಬ ಲಾಡಿ ಹುಳುವಿನ ರೋಗವೂ ಮನುಷ್ಯನಿಗೆ ಬರುತ್ತವೆ. ಬಲಿತಲಾಡಿಹುಳುಗಳು ಅಷ್ಟಾಗಿ ತೊಂದರೆ ಕೊಡದು. ಸಾಮಾನ್ಯವಾಗಿ ನಿಶ್ಯಕ್ತಿ ಮತ್ತು ರಕ್ತಹೀನತೆ ಇರಬಹುದು. ಅಕಸ್ಮಾತ್ತಾಗಿ ಸಿಸ್ಟಿಸರ್ಕಸುಗಳೇ ಮಾನವನ ಊತಕಗಳಲ್ಲಿ ತಂಗುವುವಾಗಿದ್ದರೆ ಆಗ ತೊಂದರೆ ಹೆಚ್ಚು. ಮಲದಲ್ಲಿ ತುಂಡುಲಾಡಿ ಕಂಡುಬಂದಾಗ ಲಾಡಿಹುಳು ಇರುವ ಸ್ಥಿತಿಯನ್ನು ಪತ್ತೆಹಚ್ಚಬಹುದು.

	ಟೇನಿಯಸ್ಲ್ಯಾಜಿನೇಟಾ (ಗೋಮಾಂಸದ ಲಾಡಿಹುಳು) : ಇದು ಪ್ರಪಂಚವ್ಯಾಪಿಯಾಗಿದ್ದರೂ ಈಜಿಪ್ಟ್ ಮತ್ತು ಗ್ರೀಸ್ ದೇಶಗಳಲ್ಲಿ ಇದರ ಹಾವಳಿ ಜಾಸ್ತಿ. ಉದ್ದ ಸುಮಾರು 5 ಮೀ. ಪ್ರೊಗ್ಲಾಟಿಡುಗಳು ಸಂಖ್ಯೆ ಸುಮಾರು 1000-2000. ಇದರ ಕೊಕ್ಕೆತಲೆಯಲ್ಲಿ ನಾಲ್ಕು ಹೀರುನಳಿಕೆಗಳಿವೆ. ಮೊಟ್ಟೆತುಂಬಿದ ತುಂಡು ಲಾಡಿಗಳಲ್ಲಿ ಗರ್ಭಕೋಶದ ಎರಡು ಕಡೆಗಳು ಕವಲುಗಳ ಸಂಖ್ಯೆ ಸುಮಾರು ಇಪ್ಪತ್ತು. ದನಗಳು ಮೊಟ್ಟೆಗಳನ್ನು ನುಂಗಿದಾಗ ಅವು ಕರುಳಿನಲ್ಲಿ ಒಡೆದು ಹೆಕ್ಸ್‍ಕ್ಯಾಂಥ್ ಮರಿಗಳು ಕರುಳಿನ ಗೋಡೆಯನ್ನು ಭೇದಿಸಿಕೊಂಡು ಮೆಸೆಂಟಿರಿಕ್ ಅಭಿಧಮನಿಗಳ ಮೂಲಕ ಮಾಂಸಖಂಡಗಳನ್ನು ನೇರಿ ಸಿಸ್ಟಿಸರ್ಕಸ್ ಬೋವಿಸುಗಳಾಗಿ ಪರಿವರ್ತನೆ ಹೊಂದುತ್ತವೆ. ಸೋಂಕು ಹತ್ತಿದ ದನದ ಮಾಂಸವನ್ನು ಚೆನ್ನಾಗಿ ಬೇಯಿಸದೆ ತಿಂದರೆ ವ್ಯಕ್ತಿಗೆ ಸೋಂಕು ಹತ್ತುತ್ತದೆ. ರೋಗಲಕ್ಷಣಗಳಲ್ಲಿ ಇದು ಹಂದಿಮಾಂಸದ ಲಾಡಿಹುಳುವಿನ ಸೋಂಕನ್ನು ಹೋಲುತ್ತದೆ.

	ಟೀನಿಯ ಸೋಲಿಯಮ್ : ಇದು ಕೂಡ ಪ್ರಪಂಚವ್ಯಾಪಿ. ಆದರೆ ಮಧ್ಯ ಯೂರೊಪ್, ದಕ್ಷಿಣ ಆಫ್ರಿಕ ಮತ್ತು ಏಷ್ಯ ಈ ವಲಯಗಳಲ್ಲಿ ಜಾಸ್ತಿ. ಉದ್ದದಲ್ಲಿ ಟೀನಿಯಸ್ಲ್ಯಾಜಿನೇಟಾಕ್ಕಿಂತ ಚಿಕ್ಕದು. ದೊಡ್ಡ ಹುಳು ಮನುಷ್ಯನಲ್ಲಿ ಮಾತ್ರ ಜೀವಿಸುತ್ತದೆ. ಆದರೆ ಸಿಸ್ಟಿಸರ್ಕಸ್ ಪೂರ್ವಹಂತವಾದ ಕವಚಯುಕ್ತ ಮರಿ (ಹೆಕ್ಸಕ್ಯಾಂತ) ಸಾಮಾನ್ಯವಾಗಿ ಹಂದಿಯ ಊತಕಗಳಲ್ಲಿರುತ್ತದೆ. ಮತ್ತು ಮನುಷ್ಯನಲ್ಲಿಯೂ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಸೋಂಕು ಹತ್ತಿದ ಹಂದಿಮಾಂಸವನ್ನು ವ್ಯಕ್ತಿಸೇವಿಸಿದಾಗ ಕವಚಯುಕ್ತ ಹೆಕ್ಸಕ್ಯಾಂತ್‍ಮರಿ ಜಠರವನ್ನು ಸೇರುತ್ತದೆ. ಕವಚದಿಂದ ಬಿಡುಗಡೆ ಹೊಂದಿದ ಮರಿಗಳು ಕರುಳಿನ ಲೋಳೆಪೋರೆಯನ್ನು ಭೇದಿಸಿ ದೇಹದ ಅನೇಕ ಭಾಗಗಳಿಗೆ ಪಸರಿಸಲ್ಪಡುತ್ತವೆ. ಅಲ್ಲಿ ಸಿಸ್ಟಿಸರ್ಕಸ್ ಹುಳುಗಳಾಗಿ ಮಾರ್ಪಾಡು ಹೊಂದುತ್ತವೆ. ಸಾಮಾನ್ಯವಾಗಿ ಅಡೆಚರ್ಮ ಮಾಂಸಖಂಡ, ಮಿದುಳು, ಫುಫ್ಪುಸಗಳಲ್ಲಿ ಇವು ತಂಗಿ ಬಟಾಣಿಕಾಳಿನ ಹಾಗೆ ಕಾಣಿಸಿಕೊಳ್ಳುತ್ತವೆ. ಐದು ವರ್ಷದ ಪರ್ಯಂತ ಇವು ದೇಹದಿಂದ ಹೊರಬರಲು ಅವಕಾಶವಿಲ್ಲದಿದ್ದರೆ ಸತ್ತು ಹೋಗುತ್ತವೆ. ಮಿದುಳಿನಲ್ಲಿರುವಾಗ ಇವು ನರಮಂಡಲದ ಅನೇಕ ರೋಗ ಚಿಹ್ನೆಗಳನ್ನು ಉಂಟುಮಾಡಬಹುದು. ಅದಿರು ರೋಗ ವ್ಯಕ್ತಿತ್ವದಲ್ಲಿ ಬದಲಾವಣೆ ಮುಂತಾದವು. ಉಂಟಾಗಬಹುದು.

	ಹೈಡಾಟಿಡ್‍ರೋಗ : ಟೀನಿಯ ಎಕೈನೊಕಾಕಸ್ ಎಂಬ ಲಾಡಿಹುಳುವಿನ ಜಿಟ್ಟಿ (ಕೋಶ) ಹಂತದ ಸೋಂಕಿನಿಂದ ಬರುವ ರೋಗ. ಈ ಲಾಡಿಹುಳುಗಳು ಬಲುಚಿಕ್ಕದು, ಉದ್ದ 0.5 ಸೆಂಮೀ, ನಾಯಿ ಕರುಳಿನಲ್ಲಿ ಇದರ ವಾಸ, ಮಧ್ಯಸ್ಥ ಅತಿಥೇಯಗಳಿಂದ ಕುರಿ, ದನ, ಕುದುರೆ-ಅಪರೂಪಕ್ಕೆ ಮನುಷ್ಯ ಇದರ ಮೊಟ್ಟೆಗಳನ್ನು ನುಂಗುವುದರಿಂದ ಅವನಲ್ಲಿ ಸೋಂಕು ಉಂಟಾಗುತ್ತದೆ. ಮೊಟ್ಟೆಗಳು ಮುಂಗುರುಳಿನಲ್ಲಿ ಒಡೆದು ಭ್ರೂಣಗಳು ಹೊರಬೀಳುತ್ತವೆ. ಇವು ಕರುಳಿನ ಗೋಡೆಯನ್ನು ಭೇದಿಸಿ ರಕ್ತವನ್ನು ಸೇರಿ ರಕ್ತಪರಿಚಲನೆಯ ಮೂಲಕ ಅನೇಕ ಅಂಗಾಂಗಳನ್ನು ಸೇರುತ್ತವೆ. ಅಲ್ಲಿ ಜಿಟ್ಟಿಗಳಾಗಿ ಮಾರ್ಪಾಡುಹೊಂದುತ್ತವೆ. ಹೈಡಾಟಿಡ್ ಕಾಯಿಲೆ ಆಸ್ಟ್ರೇಲಿಯ, ಐಸಲೆಂಡ್, ದಕ್ಷಿಣ ಅಮೆರಿಕ ಮತ್ತು ಮಧ್ಯ ಪ್ರಾಚ್ಯವಲಯಗಳಲ್ಲಿ ಕಂಡುಬರುತ್ತದೆ. ಹೈಡಾಟಿಡ್ ಕೋಶಗಳು ಸಾಮಾನ್ಯವಾಗಿ ಯಕೃತ್ತು ಮತ್ತು ಫುಫ್ಪುಸಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮಿದುಳು ಮತ್ತು ಕಣ್ಣುಗಳಲ್ಲಿಯೂ ಇವು ಉಂಟಾಗಬಹುದು. ಯಕೃತ್ತಿನಲ್ಲಿ ಕೋಶಗಳು ಬಹಳ ದೊಡ್ಡವಾಗಿ ಏನೂ ರೋಗ ಲಕ್ಷಣಗಳಲ್ಲದಿರಬಹುದು. ಯಕೃತ್ತಿನ ಅಥವಾ ಹೊಟ್ಟೆವೋವು ಉಂಟಾಗಬಹುದು. ಪಿತ್ತರಸನಾಳಗಳ ಮೇಲಿನ ಒತ್ತಡದಿಂದ ಕಾಮಾಲೆ ಬರಬಹುದು. ಫುಫ್ಪುಸಗಳಲ್ಲಿರುವ ಹೈಡಾಟಿಡ್ ಕೋಶದೊಡ್ಡದಾಗ ಕೆಮ್ಮು ಮತ್ತು ಕೆಮ್ಮಿನಲ್ಲಿ ರಕ್ತ ತಲೆದೋರಬಹುದು. ಬಹಳ ದಿವಸದ ಮೇಲೆ ಜಿಟ್ಟಿಗಳಲ್ಲಿ ಸುಣ್ಣಗಟ್ಟಬಹುದು. ಕ್ಯಾಸೋನಿಪರೀಕ್ಷೆಯಿಂದ ಈ ರೋಗವನ್ನು ಪತ್ತೆಮಾಡಬಹುದು.

	ಹೈಮೆನೊಲೆಪ್ಸಿಸ್ ನಾನು (ಗುಜ್ಜಾರಿ ಲಾಡಿಹುಳು) : ಮನುಷ್ಯನ ಕರುಳಿನ ಲಾಡಿಹುಳುಗಳಲೆಲ್ಲ ಅತ್ಯಂತ ಚಿಕ್ಕದು ಇದು. ಇದರ ಸೋಂಕು ಉಷ್ಣವಲಯಗಳಲ್ಲಿ ಕಂಡುಬರುತ್ತದೆ. ಮೊಟ್ಟೆಗಳನ್ನು ಆಕಸ್ಮಾತ್ ನುಂಗಿದರೆ ಅವು ಮುಂಗುರುಳಿನಲ್ಲಿ ಒಡೆದು ಲೋಮಗಳ ತಡಕೆಗಳನ್ನು ಪ್ರವೇಶಿಸಿ ಸಿಸ್ಟಿಸರ್ಕಾಯಿಡ್ ಮರಿಹುಳುವಾಗಿ ರೂಪಾಂತರ ಹೊಂದುತ್ತವೆ. ಪುನಃ ಕರುಳಿನ ನಾಳಕ್ಕೆ ಬಂದು ಎರಡು ವಾರಗಳಲ್ಲಿ ಬಲಿತ ಹುಳುಗಳಾಗುತ್ತವೆ. ಅತಿಭೇದಿ, ನಿದ್ರಾರಾಹಿತ್ಯ, ಮೂಗು ಮತ್ತು ಗುದದ್ವಾರದ ನವೆ. ದದ್ದು ಹೊಟ್ಟೆನೊವು ಇತ್ಯಾದಿ ಉಂಟಾಗಬಹುದು.

	ಡೈಫಿಲ್ಲೊಬಾಥ್ರಿಯಮ್‍ಲೇಟಮ್ : ಯೂರೋಪ್, ಏಷ್ಯ, ಆಫ್ರಿಕ, ಅಮೆರಿಕ ದೇಶಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಕಂಡುಬಂದಿಲ್ಲ. ಹುಳುವಿನ ಉದ್ದ 3-10 ಮೀ. ಪ್ರೊಗ್ಲಾಟಿಡುಗಳ ಸಂಖ್ಯೆ 4,000ದ ವರೆಗೂ ಇರಬಹುದು. ಮನುಷ್ಯ, ನಾಯಿ ಮತ್ತು ಬೆಕ್ಕು ನಿರ್ದಿಷ್ಟ ಅತಿಥೇಯಗಳ, ಸೈಕ್ಲೋಪ್ಸ್ ಮೊದಲನೆಯ ಮಧ್ಯವರ್ತಿ ಅತಿಥೇಯ, ಎರಡನೆಯದು ಸಿಹಿನೀರಿನ ಮೀನು. ನಿರ್ದಿಷ್ಟ ಅತಿಥೇಯದ ಮಲದಲ್ಲಿ ಮೊಟ್ಟೆಗಳು ವಿಸರ್ಜಿಸಲ್ಪಡುತ್ತವೆ. ಇವು ನೀರನ್ನು ಸೇರಿದಾಗ ಒಡೆದು. ಭ್ರೂಣ ಹೊರಬಿದ್ದು ನೀರಿನಲ್ಲಿ ಈಜಾಡುತ್ತಿರುತ್ತದೆ 12 ಗಂಟೆಯೊಳಗೆ ಸೈಕ್ಲೊಪ್ಸಿನಿಂದ ನುಂಗಲ್ಪಟ್ಟಲ್ಲಿ ಅದರ ದೇಹಾವಕಾಶದೊಳಗೆ ನುಸುಳಿ ಪ್ರೊಸರ್ಕಾಯಿಡ್ ಹಂತದ ಮರಿಹುಳುವಾಗಿ ಮಾರ್ಪಾಡು ಹೊಂದುತ್ತದೆ. ಸೋಂಕು ಉಂಟಾದ ಸೈಕ್ಲೋಪ್ಸನ್ನು ಸಿಹಿನೀರಿನ ಮೀನು ನುಂಗಿದರೆ ಅದರ ಮಾಂಸಖಂಡಗಳಿಗೋ ಸಂಯೋಜಕ ಅಂಗಾಂಶಗಳಿಗೋ ಹೋಗಿ ಪ್ಲೀರೋಸರ್ಕಾಯಿಡ್ ಹಂತದ ಮರಿಹುಳುವಾಗುತ್ತದೆ. ಸೋಂಕುಮುಟ್ಟಿದ ಮೀನನ್ನು ತಿನ್ನುವುದರಿಂದ ಮನುಷ್ಯನಿಗೆ ತಾಗುತ್ತದೆ. ಅವನ ಮುಂಗುರುಳಿನಲ್ಲಿ ಪರೋಪಜೀವಿ ನೆಲಸಿ 3-4 ವಾರಗಳಲ್ಲಿ ಬಲಿತು ಮೊಟ್ಟೆ ಉತ್ಪನ್ನ ಮಾಡಲು ಶುರುಮಾಡುತ್ತದೆ. ಭೇದಿ, ಎದೆ ಉರಿ, ಹೊಟ್ಟೆಭಾರ ಮತ್ತು ವಾಂತಿ ಈ ರೋಗದ ಮುಖ್ಯ ಲಕ್ಷಣಗಳು. ಮೆಗಲೊಬ್ಲಾಸ್ಟಿಕ್ ಅನಿಮಿಯ ಉಂಟಾಗಬಹುದು.

	ದಂಡುಹುಳುಗಳು ರೋಗಗಳು. ಎಂಟಿರೋಬಿಯಾಸಿಸ್ : ಎಂಟಿರೋಬಿಯಾಸ್ ಪರ್ಮಿಕ್ಯುಲಾರಿಸ್ (ದಾರದ ಹುಳು, ಸೂಜಿಹುಳು) ಎಂಬ ಹುಳುವಿನಿಂದ ಬರುವ ರೋಗ. ದಾರದ ಹುಳಗಳು ಮಕ್ಕಳಲ್ಲಿ ಸರ್ವೇಸಾಧಾರಣವಾಗಿ ಕಂಡುಬರತ್ತವೆ. ಅವು 0.8-1 ಸೆಂಮೀ ಉದ್ದ ಮತ್ತು 0.5 ಮಿಮೀಗಿಂತಲೂ ಕಡಿಮೆ ಗಾತ್ರವಿದ್ದು ಹತ್ತಿಯ ದಾರದ ಹಾಗೆ ಕಾಣಿಸುತ್ತವೆ. ಹೆಣ್ಣುಹುಳು ಗಂಡುಹುಳುವಿಗಿಂತ ದೊಡ್ಡದು. ಹೆಣ್ಣು ಮತ್ತು ಗಂಡುಹುಳುಗಳು ದೊಡ್ಡಕರುಳು ಅದರಲ್ಲೂ ಹೆಚ್ಚಾಗಿ ಮೂಗುಗಳಿನಲ್ಲಿ ಮತ್ತು ನೆಟ್ಟಗರುಳಿನಲ್ಲಿ ವಾಸಿಸುತ್ತವೆ. ಇವು ಗುದನಾಳದ ಮೂಲಕ ಗುದದ್ವಾರದ ಹೊರಗೆ ಬಂದು ಬಹಳ ನವೆಯನ್ನು ಉಂಟುಮಾಡುತ್ತವೆ. ಕರುಳಿನಲ್ಲಿ ಗಂಡುಹೆಣ್ಣುಗಳು ಮಿಲನ ಹೊಂದಿ ಮೊಟ್ಟೆಗಳು ಮಲದಲ್ಲಿ ಹೊರಬೀಳುತ್ತವೆ. ರೋಗಿ ನವೆಯಿಂದಾಗಿ ಗುದದ್ವಾರವನ್ನು ಕೆರೆದುಕೊಂಡಾಗ ಮೊಟ್ಟೆಗಳು ಅವನ ಉಗುರು ಸಂದಿಗಳಲ್ಲಿ ಸೇರಿ ಕೊಳ್ಳುತ್ತವೆ. ಆಹಾರದ ಮೂಲಕವಾಗಿಯಾಗಲಿ ಬೆರಳನ್ನು ಚೀಪಿದಾಗ ಆಗಲಿ ಅವು ಮನುಷ್ಯನ ಕರುಳನ್ನು ಸೇರುತ್ತವೆ. ಮೊಟ್ಟೆಯಿಂದ ಹೊಸಪೀಳಿಗೆಯ ಹುಳುಗಳು ಕರುಳಿನಲ್ಲಿ ಬೆಳೆಯುತ್ತವೆ. ರೋಗಿಗೆ ಅವುಗಳಿಂದ ಏನೂ ತೊಂದರೆಯಿಲ್ಲದಿರಬಹುದು. ಅವು ಮೊದಲು ಮಲದಲ್ಲಿ ಕಾಣಿಸಿಕೊಳ್ಳಬಹುದು. ಗುದದ್ವಾರದಲ್ಲಿ ನವೆ ಉಂಟಾಗಿ ಕೆರೆದುಕೊಂಡಾಗ ಇಸುಬಿನಂತಾಗಿ ಗಾಯವಾಗಬಹುದು. ಬಹಳ ಅಪರೂಪವಾಗಿ ಅಪೆಂಡಿಸೈಟಿಸ್ ರೋಗಕ್ಕೆ ಅವು ಕಾರಣವಾಗಬಹುದು. ಮಲದಲ್ಲಿ ಅವು ಕಾಣಬರುವುದರಿಂದ ಮತ್ತು ಗುದದ್ವಾರದಿಂದ ತೆಗೆದುಕೊಂಡ ಲೇಪವನ್ನು ಸೂಕ್ಷ್ಮದರ್ಶಕ ಯಂತ್ರದಿಂದ ನೋಡುವುದರಿಂದ ಅವುಗಳ ಮೊಟ್ಟೆಗಳು ಕಾಣಿಸಬಹುದು.

	ಆಸ್ಕಾರಿಯಾಸಿಸ್ : ಇದು ಆಸ್ಕಾರಿಸ್ ಲಂಬ್ರಿಕಾಯ್ಡಿಸಿನಿಂದ (ಜಂತುಹುಳು) ಬರುವ ರೋಗ. ಫಲಿಸಿದ ಮೊಟ್ಟೆಗಳನ್ನು ನುಂಗುವುದರಿಂದ ಮನುಷ್ಯನಿಗೆ ಇದರ ಸೋಂಕು ತಾಗುತ್ತದೆ. ಮೊಟ್ಟೆಗಳು ಮುಂಗುರುಳಿನಲ್ಲಿ ಒಡೆದಾಗ ಹೊರಬೀಳುವ ಕರುಳಿನ ಗೋಡೆಯನ್ನು ಭೇದಿಸಿ ಅಭಿಧಮನಿಗಳ ಮೂಲಕ ಹೃದಯವನ್ನು ಸೇರಿ ಅಲ್ಲಿಂದ ಫುಫ್ಪುಸಗಳನ್ನು ಸೇರಿ ಅಲ್ಲಿ ಉರಿತವನ್ನು ಉಂಟುಮಾಡಬಹುದು. ಅಲ್ಲಿಂದ ಸೂಕ್ಷ್ಮ ಶ್ವಾಸನಾಳಗಳ ಮೂಲಕ ಗಂಟಲ ಕುಳಿಯನ್ನು ತಲಪಿ ನುಂಗಲ್ಪಟ್ಟು ಕರುಳಿನಲ್ಲಿ ಬಲಿತ ಹುಳುಗಳಾಗಿ ಬೆಳೆಯುತ್ತವೆ. ಬಲಿತ ಜಂತುಹುಳು (ಗಂಡು) 12 ರಿಂದ 30 ಸೆಂಮೀ ಇದ್ದು ಬಿಳಿ ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಹೆಣ್ಣುಹುಳು 20ರಿಂದ 34 ಸೆಂಮೀ ಉದ್ದವಿರುತ್ತದೆ. ತೀವ್ರ ರೋಗಲಕ್ಷಣಗಳು ಯಾವುವೂ ಇಲ್ಲದಿರಬಹುದು. ಹುಳುಗಳನ್ನು ಮಲದಲ್ಲಿ ಕಂಡು ಅಥವಾ ಮಲವನ್ನು ಸೂಕ್ಷ್ಮದರ್ಶಕದಿಂದ ಪರಿಶೀಲಿಸಿ ಮೊಟ್ಟೆಗಳು ನೋಡಿ ಸೋಂಕನ್ನು ಪತ್ತೆಹಚ್ಚಬಹುದು. ಬಲಿತ ಹುಳುಗಳು ಹೊಟ್ಟೆನುಲಿತ, ಅಗ್ನಿಮಾಂದ್ಯ, ಹೊಟ್ಟೆ ಉಬ್ಬರ ಮುಂತಾದವಕ್ಕೆ ಕಾರಣವಾಗಬಹುದು. ಒಂದೊಂದು ಸಲ ಉಂಡುಂಡೆಯಾಗಿ ಕಲೆತು ಕರುಳಿನಲ್ಲಿ ಅಡಚಣೆ ತಲೆದೋರಬಹುದು. ಪಿತ್ತನಾಳಗಳಲ್ಲಿ ಸೇರಿಕೊಂಡು ಅಲ್ಲಿಯೂ ಹೀಗಾಗಬಹುದು. ಮರಿಹುಳುಗಳು ಶ್ವಾಸಕೋಶದ ಮೂಲಕ ವಲಸೆ ಹೋಗುವಾಗ ಕೆಮ್ಮು ಜ್ವರ ಮತ್ತು ರಕ್ತದಲ್ಲಿ ಶ್ವೇತಕಣಗಳ ಸಂಖ್ಯೆಯ ಹೆಚ್ಚಳವಾಗಬಹುದು.

	ಟ್ರೈಕ್ಯೂರಿಸ್ ಟ್ರೇಕಿಯೂರ (ಚಾವಣಿಹುಳು) : ಚಾವಟಿಕ್ರಿಮಿ ಪ್ರಪಂಚವ್ಯಾಪಿ. ಉಷ್ಣವಲಯದಲ್ಲಿ ಇದರ ಹಾವಳಿ ಜಾಸ್ತಿ. ಇದು ದೊಡ್ಡ ಕರುಳಿನ ಮೂಗರಳು (ಸೀಕಮ್) ಮತ್ತು ಅಪೆಂಡಿಕ್ಸ್ ಭಾಗಗಳಲ್ಲಿ ಇರುತ್ತದೆ. ಹುಳುವಿನ ಉದ್ದ 30-45 ಮಿಮೀ ಮೊಟ್ಟೆಗಳನ್ನು ನುಂಗಿದಾಗ ಅವು ಮುಂಗರುಳಿನಲ್ಲಿ ಒಡೆಯುತ್ತವೆ. ಮರಿಹುಳುಗಳು ಸುಮಾರು 90 ದಿವಸಗಳಲ್ಲಿ ಬಲಿತು ಹೊಸಜೀವನ ಚಕ್ರವನ್ನು ಆರಂಭಿಸುವುವು. ಲಘು ಸೋಂಕಿನಲ್ಲಿ ಏನೂ ಲಕ್ಷಣಗಳಿಲ್ಲದಿರಬಹುದು. ಕ್ರಿಮಿಗಳು ಜಾಸ್ತಿ ಇದ್ದಾಗ ರಕ್ತಸ್ರಾವ ವಾಗಬಹುದು. ಸುರುಳ್ಗರುಳು (ವಾಲ್‍ವ್ಯೂಲಸ್) ಮತ್ತು ಗುದನಾಳ ಸ್ಥಳ ಬಿಟ್ಟು ಜಾರಿ ಬೀಳಬಹುದು.

	ಟ್ರಿಕಿನಿಯಾಸಿಸ್ (ಟ್ರೆಕಿನೋಸಿಸ್) : ಟ್ರಿಕಿನೆಲ್ಲಾ ಸ್ಪೈರಾಲಿಸ್ ಎಂಬ ಹುಳುವಿನಿಂದ ಬರುವ ರೋಗ, ಯೂರೋಪ್ ಮತ್ತು ಅಮೆರಿಕಖಂಡಗಳಲ್ಲಿ ಹೆಚ್ಚು ಕಂಡುಬರುತ್ತದೆ. ಹಂದಿ ಮಾಂಸ ತಿನ್ನುವುದರಲ್ಲಿ ಜಾಸ್ತಿ. ಬಲು ಚಿಕ್ಕ ದುಂಡುಹುಳು ಗಂಡು 1.5 ಮಿಮೀ, ಹೆಣ್ಣು 2 ಮಿಮೀ ಉದ್ದ ಇರುತ್ತವೆ. ಹುಳು ಹಂದಿಕರುಳಿನಲ್ಲಿ ವಾಸಿಸುತ್ತದೆ. ಗಂಡು ಹೆಣ್ಣು ಕಲೆತ ಮೇಲೆ ಗಂಡು ಹುಳು ಸಾಯುತ್ತದೆ. ಹುಟ್ಟಿದ ಮರಿಹುಳುಗಳು ಅಭಿಧಮನಿಗಳು ಮೂಲಕ ಹೃದಯವನ್ನು ಸೇರಿ ಅಲ್ಲಿಂದ ಫುಫ್ಪುಸ ಮತ್ತು ಯಕೃತ್ತಿನ ಲೋಮನಾಳಗಳ ಮೂಲಕ ರಕ್ತಪರಿಚಲನೆಯನ್ನು ತಲಪಿ ದೇಹದ ಅನೇಕ ಅಂಗಾಂಗಗಳನ್ನು ತಲಪುತ್ತವೆ. ಮಾಂಸಖಂಡಗಳಲ್ಲಿ ವೃದ್ಧಿ ಹೊಂದಿ 0.5 ಮಿಮೀ ಇರುವ ಚಿಕ್ಕ ಜಿಟ್ಟಿಗಳಾಗಿ ಮಾರ್ಪಾಡಾಗುತ್ತವೆ. ಚೆನ್ನಾಗಿ ಬೇಯಿಸದೆ ಇರುವ ಹಂದಿಯ ಮಾಂಸವನ್ನು ಮನುಷ್ಯ ತಿಂದಾಗ ಹುಳು ಮನುಷ್ಯನ ಸಣ್ಣ ಕರುಳನ್ನು ಸೇರಿ ವೃದ್ಧಿ ಹೊಂದುತ್ತದೆ. ಸ್ವಲ್ಪ ದಿವಸಗಳಲ್ಲಿ ಭ್ರೂಣಗಳು ರಕ್ತಪರಿಚಲನೆಯ ಮೂಲಕ ದೇಹದಲ್ಲೆಲ್ಲ ಹಬ್ಬುತ್ತವೆ. ಸೋಂಕು ಹತ್ತಿದ ಪ್ರಾಣಿಯ ಮಾಂಸವನ್ನು ಚೆನ್ನಾಗಿ ಬೇಯಿಸದೆ ತಿನ್ನುವುದರಿಂದ ಮನುಷ್ಯನಿಗೆ ಸೋಂಕು ತಾಗುತ್ತದೆ. ಮಾಂಸದಲ್ಲಿರುವ ಕೋಶಾವಸ್ಥೆಯ ಮರಿಹುಳುಗಳು ಮನುಷ್ಯನ ಕರುಳಿನಲ್ಲಿ ಬಿಡುಗಡೆ ಹೊಂದುತ್ತದೆ. ಮಾಂಸವನ್ನು ತಿಂದ ಸ್ವಲ್ಪ ಹೊತ್ತಿಗೆ ವಾಕರಿಕೆ ಶುರುವಾಗಿ ಎರಡು ಮೂರು ದಿವಸಗಳಿರುತ್ತದೆ, ಒಂದು ವಾರದ ಮೇಲೆ ಮರಿಹುಳುಗಳು ವಲಸೆ ಹೋಗುತ್ತಿರುವಾಗ ಜ್ವರ, ಸ್ನಾಯು ನೋವು, ಸ್ನಾಯುಗಳ ಊತದಿಂದಾಗಿ ಮಾತು ಉಸಿರಾಟ ಮತ್ತು ಜಗಿತಗಳಿಗೆ ಅಡಚಣೆ ಉಂಟಾಗಬಹುದು. ಕಣ್ಣಾಲಿಗಳು ಊದಿಕೊಳ್ಳಬಹುದು. ಉಗುರಿನಅಡಿಯಲ್ಲಿ ರಕ್ತಸ್ರಾವವುಂಟಾಗಬಹುದು. ಸ್ನಾಯುವಿನ ಜೀವುಂಡಿಗೆಯ ಪರೀಕ್ಷೆಯಿಂದ ಜಿಟ್ಟಿಗಳನ್ನು ಕಾಣಬಹುದು. ರಕ್ತದಲ್ಲಿ ಶ್ವೇತಕಣಗಳು ಜಾಸ್ತಿಯಾಗಬಹುದು. ಈ ಹಂತ ನಿಧಾನವಾಗಿ ಅಂದರೆ ಕೆಲವು ವಾರಗಳಲ್ಲಿ ತಹಬದಿಗೆ ಬರುತ್ತವೆ. ಸ್ನಾಯುಗಳಲ್ಲಿರುವ ಮರಿ ಹುಳುಗಳು ಆಗ ಸತ್ತು ಸುಣ್ಣದ ಲವಣಗಳು ಸೇರಿ ಗಡುಸಾಗಿ ಬಿಡುವುವು. ಅಪರೂಪವಾಗಿ ಹೃದಯದ ಸ್ನಾಯುವಿನಲ್ಲಿ ಉಂಟಾಗುವ ಗಾಸಿಗಳಿಂದ ಹೃದಯಕ್ರಿಯೆ ನಿಂತು ಸಾವು ಸಂಭವಿಸುವುದುಂಟು.

	ಆಂಕಿಲೊಸ್ಟೋಮಿಯಾಸಿಸ್ : ಹುಕ್ ವರ್ಮ್ (ಕೊಕ್ಕೆ ಹುಳು) ಕ್ರಿಮಿಯಿಂದ ಬರುವ ರೋಗ. ಕೊಕ್ಕೆಹುಳುಗಳಲ್ಲಿ ಎರಡು ವಿಧ : ಅಂಕೈಲೊಸ್ಟೋಮ ಡುಯೊನೇಲ್, ನಿಕೇಟಾರ್ ಅಮೆರಿಕಾನಸ್. ಇವು ಸಣ್ಣ ಕರುಳಿನಲ್ಲಿ ವಾಸಿಸುತ್ತವೆ, ಬಲಿತ ಹುಳುವಿನ ಉದ್ದ 1 ಸೆಂಮೀ ಇದರ ಮೊಟ್ಟೆ ಅಂಡಾಕಾರ ಅದಕ್ಕೆ ತೆಳು ಕವಚ ಉಂಟು. ಮೊಟ್ಟೆಯಲ್ಲಿ 2-8 ಪಾಲೆಗಳು ಕಾಣಿಸುತ್ತವೆ. ಬೆಚ್ಚಗಿರುವ ಮತ್ತು ತೇವವಾಗಿರುವ ಮಣ್ಣಿನಲ್ಲಿ ಮೊಟ್ಟೆಗಳು ಒಡೆದು ಸೋಂಕುಕಾರಕ ಎಳೆ ಮರಿಗಳಾಗುತ್ತವೆ, ಬರಿಗಾಲಿನಲ್ಲಿ ಮನುಷ್ಯ ನಡೆಯುವಾಗ ಮರಿಹುಳುಗಳು ಚರ್ಮದ ಮೂಲಕ ರಕ್ತನಾಳಗಳನ್ನು ಪ್ರವೇಶಿಸಿ ಹೃದಯವನ್ನು ಸೇರಿ ಫುಫ್ಪುಸವನ್ನು ಸೇರಿ ಅಲ್ಲಿ ವೃದ್ಧಿಗೊಂಡು ಒಂದುವಾರದಲ್ಲಿ ಶ್ವಾಸನಾಳದ ಮೂಲಕ ಕಿರುನಾಲಗೆಗೆ ಏರಿ ನುಂಗಲ್ಪಟ್ಟಾಗ ಸಣ್ಣ ಕರುಳನ್ನು ಸೇರಿ ಅಲ್ಲಿ ವೃದ್ಧಿಗೊಳ್ಳುತ್ತವೆ. ಬಾಯಿಯ ಲೋಳೆಪೊರೆಯಿಂದಲೂ ಪ್ರವೇಶಿಸಬಹುದು. ಇದರ ಸೋಂಕು ಸಾಮಾನ್ಯವಾಗಿ ಎಲ್ಲ ಕಡೆಯೂ ಇದೆ. ಆದರೆ ಉಷ್ಣವಲಯ ಮತ್ತು ಸಮಶೀತೊಷ್ಣವಲಯಗಳಲ್ಲಿ ಜಾಸ್ತಿ. ಅಡ್ಯುಡೇನಲ್ ಸೋಂಕು ಯೂರೋಪ್, ಉತ್ತರ ಆಫ್ರಿಕ, ಭಾರತ (ಪಂಜಾಬ್ ಮತ್ತು ಉತ್ತರ ಪ್ರದೇಶ), ಶ್ರೀಲಂಕಾ, ಮಧ್ಯ ಮತ್ತು ಉತ್ತರ ಚೀನ, ಪೆಸಿಫಿಕ್ ದ್ವೀಪ ಮತ್ತು ದಕ್ಷಿಣ ಅಮೆರಿಕ ಇಲ್ಲೆಲ್ಲ ಕಂಡುಬರುತ್ತದೆ. ನಿಕೇಟಾರ್ ಅಮೆರಿಕಾನಸ್ ಸೋಂಕು ಭಾರತ ಶ್ರೀಲಂಕಾ, ಪಶ್ಚಿಮ, ಪೂರ್ವ ಮತ್ತು ಮಧ್ಯ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯ ಈ ಪ್ರದೇಶಗಳಗಳಲ್ಲಿದೆ. ಕ್ರಿಮಿ ಚರ್ಮವನ್ನು ಪ್ರವೇಶಿಸಿದ ಜಾಗದಲ್ಲಿ ಉರಿತದ ಮತ್ತು ಒಗ್ಗದಿಕೆಯ ಪರಿಣಾಮ ಉಂಟಾಗುತ್ತದೆ. ಏಕಾಣುಜೀವಿಯ ಸೋಂಕಿನಿಂದ ಬೊಕ್ಕೆಗಳು ಏಳಬಹುದು. ಫುಫ್ಪುಸಗಳಿಗೆ ಮರಿಕ್ರಿಮಿಗಳು ವಲಸೆ ಹೋಗುವಾಗ ಅಲ್ಲಲ್ಲಿ ಫುಫ್ಪುಸ ಉರಿತ ಉಂಟಾಗಬಹುದು.

	ರಕ್ತದಲ್ಲಿ ಇಯೊಸಿನೊಫಿಲ್ಲುಗಳು ಜಾಸ್ತಿ ಆಗಬಹುದು. ಸಣ್ಣಕರುಳಿನಲ್ಲಿಹುಳುಗಳು ತಮ್ಮ ಬಾಯಿಯಿಂದ ಕರಳಿನ ಲೋಳೆಪೊರೆಗೆ ತಗುಲಿಕೊಂಡು ರಕ್ತವನ್ನು ಹೀರುತ್ತವೆ. ಒಂದು ಆ. ಡ್ಯುಡೆನೇಲ್ ಕ್ರಿಮಿ ದಿವಸಕ್ಕೆ 0.25 ಮಿಲೀನಷ್ಟು ರಕ್ತ ಹೀರಬಲ್ಲದು. ಇದರಿಂದ ರಕ್ತ ಕೊರೆ ಉಂಟಾಗುತ್ತದೆ.ಚೆನ್ನಾಗಿ ಪುಷ್ಟಿಹೊಂದಿದ ಮನುಷ್ಯನಿಗೆ ಏನೂ ರೋಗ ಲಕ್ಷಣಗಳಿಲ್ಲದಿರಬಹುದು. ಆದರೆ ಮಲಪರೀಕ್ಷೆ ಮಾಡಿದಾಗ ಕಾಯಿಲೆ ಪತ್ತೆಯಾಗಬಹುದು. ಮರಿಹುಳು ಚರ್ಮವನ್ನು ಹೊಕ್ಕ ಕಡೆ ಉರಿತವುಂಟಾಗಿ ನವೆ ಉಂಟಾಗಬಹುದು. ಇದಕ್ಕೆ ಮಣ್ಣು ಕರೆವುಣ್ಣು (ಗ್ರೌಂಡ್ ಇಚ್) ಎಂದು ಹೆಸರು. ಸೋಂಕಿನ ಪ್ರಮಾಣ ಜಾಸ್ತಿಯಿದ್ದಾಗ ಹುಳು ಫುಫ್ಪುಸದಲ್ಲಿ ಸಂಚರಿಸುವಾಗ ಕೆಮ್ಮು ಮತ್ತು ಕೆಮ್ಮಿನಲ್ಲಿ ರಕ್ತ ಉಂಟಾಗಬಹುದು. ಹುಳು ಸಣ್ಣಕರುಳಿನಲ್ಲಿದ್ದಾಗ ಹೊಟ್ಟೆನೋವು. ವಾಂತಿ ತಲೆದೋರಿ ಮುಂಗುರುಳಿನ ವ್ರಣದ ಲಕ್ಷಣಗಳನ್ನು ಹೋಲಬಹುದು. ಅನೇಕ ಬಾರಿ ಭೇದಿಯಾಗಬಹುದು. ಸೋಂಕಿನ ಪ್ರಮಾಣ ಜಾಸ್ತಿ ಇದ್ದಾಗ ರಕ್ತ ಕೊರೆ ಲಕ್ಷಣಗಳು ಪ್ರಕಟವಾಗುವುದುಂಟು. 

	ಸ್ಟ್ರಾಂಗೈಲಾಯಡಿಯಾಸಿಸ್ : ಸ್ಟ್ರಾಂಗೈಲಾಯಿಡಿಸ್ ಸ್ಟರ್‍ಕೊರಾಲಿಸ್ ಎಂಬ ಕ್ರಿಮಿಯಿಂದ ಬರುವ ರೋಗ ಉಷ್ಣವಲಯದಲ್ಲಿ ಹೆಚ್ಚು. ಮೊಟ್ಟೆಗಳು ಮಲದಲ್ಲಿ ಹೊರಬಿದ್ದು ಕೆಲವು ದಿವಸಗಳಲ್ಲಿ ರಾಬ್‍ಟಿಡಿ ಫಾರಮ್ ಮರಿಗಳಾಗುತ್ತವೆ. ಇವು ಮನುಷ್ಯನ ಚರ್ಮವನ್ನು ಭೇದಿಸಿ ರಕ್ತಪರಿಚಲನೆಯನ್ನು ಸೇರಿ ಫುಫ್ಪುಸಕ್ಕೆ ಹೋಗಿ ಅಲ್ಲಿಂದ ಜೀರ್ಣಾಂಗಗಳನ್ನು ಸೇರಿ ಅಲ್ಲಿ ವೃದ್ಧಿ ಹೊಂದುತ್ತವೆ. ಚರ್ಮದ ಆ ಭಾಗದಲ್ಲಿ ನವೆ ಉಂಟಾಗುವುದು, ದದ್ದು, ಮತ್ತು ಆಮು ರಕ್ತದಿಂದೊಡಗೂಡಿದ ಭೇದಿಯೂ ಫುಫ್ಪುಸದ ಉರಿತವೂ ತಲೆದೋರಬಹುದು.

	ಉಷರೇರಿಯ ಫೈಲಾರಿಯಾಸಿಸ್ (ಆನೆಕಾಲು ರೋಗ) : ಉಷರೇರಿಯಾ ಬ್ಲಾನ್‍ಕ್ರಾಫ್ಟಿ ಎಂಬ ಕ್ರಿಮಿಯಿಂದ ಬರುವ ರೋಗ, ಬೇರೆ ಬೇರೆ ಜಾತಿಗೆ ಸೇರಿದ ಅದರಲ್ಲೂ ಸಾಮಾನ್ಯವಾಗಿ ಕ್ಯೂಲೆಕ್ಸ್ ಫಾಟಿಗಾನ್ಸ್ ಹೆಣ್ಣುಸೊಳ್ಳೆಯಿಂದ ಉಷರೇರಿಯ ಬ್ಯಾನ್‍ಕ್ರಾಫ್ಟಿ ಮನುಷ್ಯನಿಗೆ ವರ್ಗಾಯಿಸಲ್ಪಡುತ್ತದೆ. ಬಲಿತ ಕ್ರಿಮಿಗಳ ಉದ್ದ 4-20 ಸೆಂಮೀ. ಮನುಷ್ಯನ ದುಗ್ಧನಾಳಗಳಲ್ಲಿ ವಾಸ. ಹೆಣ್ಣು ಕ್ರಿಮಿಗಳು ಮೈಕ್ರೊಫೈಲೇರಿಯಗಳನ್ನು ಹುಟ್ಟುಹಾಕುತ್ತವೆ. ಇವುಗಳ ಉದ್ದ 125 ಮೈಕ್ರಾನ್. ಇವು ರಾತ್ರಿ ದೇಹದ ಹೊರವಲಯದಲ್ಲಿ ಹರಿಯುವ ರಕ್ತದಲ್ಲಿ ಸಂಚರಿಸುತ್ತವೆ. ಹಗಲಲ್ಲಿ ಫುಫ್ಪುಸದ ಲೋಮನಾಳಗಳಲ್ಲಿ ನೆಲೆಗೊಂಡಿರುತ್ತವೆ. ಕ್ಯೂಲೆಕ್ಸ್ ಫಾಟಿಗನ್ಸ್ ಸೊಳ್ಳೆ ಮನುಷ್ಯನನ್ನು ರಾತ್ರಿ ಕಚ್ಚುವುದರಿಂದ ಸೋಂಕು ಹರಡಲು ಅನುಕೂಲವಾಗುತ್ತದೆ. ಈ ಸೋಂಕು ಉಷ್ಣವಲಯ, ಆಫ್ರಿಕ, ಆಫ್ರಿಕದ ತೀರಪ್ರದೇಶ, ಏಷ್ಯದ ತೀರಪ್ರದೇಶ, ಇಂಡೊನೇಷಿಯ, ಉತ್ತರ ಆಸ್ಟ್ರೇಲಿಯ, ದಕ್ಷಿಣ ಪೆಸಿಫಿಕ್ ದ್ವೀಪ, ಭಾರತ, ವೆಸ್ಟ್ ಇಂಡೀಸ್ ಮತ್ತು ಉತ್ತರ ದಕ್ಷಿಣ ಅಮೆರಿಕಗಳಲ್ಲಿ ಉಂಟು. ಸೋಂಕು ಉಂಟಾದ 3-16 ತಿಂಗಳುಗಳಲ್ಲಿ ಮೊದಲ ಚಹ್ನೆಗಳು ಕಂಡುಬರುತ್ತವೆ. ಆಗಾಗ್ಗೆ ಬರುವ ಜ್ವರದೊಂದಿಗೆ ದುಗ್ಧರಸ ನಾಳದ ಉರಿತ ಉಂಟಾಗಿ ಅವುಗಳ ಹಾದಿಯಲ್ಲಿ ನೋವು ಆಗುತ್ತದೆ. ಮತ್ತು ಚರ್ಮ ಕೆಂಪು ಛಾಯೆಗೆ ತಿರುಗುತ್ತದೆ. ಚರ್ಮದ ಮೇಲೆ ಕೆಂಪುಗೆರೆಗಳು ಕಾಣಿಸುತ್ತವೆ. ದುಗ್ಧರಸನಾಳದ ಉರಿತದಿಂದಾಗಿ ರೇತುವಿನ ಹುರಿಯಲ್ಲಿ ಉರಿತ, ವೃಷಣದ ಉರಿತ, ವೃಷಣದ ಮೇಲು ನಾಳದ ಉರಿತ ತಲೆದೋರಿ ಕೆಲವು ದಿವಸಗಳ ಮೇಲೆ ಜ್ವರ ನಿಂತು ರೋಗಲಕ್ಷಣಗಳು ಉಡುಗಬಹುದು. ಈ ತರಹದ ರೋಗಲಕ್ಷಣಗಳು ಆಗಾಗ್ಗೆ ಕಾಣಿಸಿಕೊಂಡು ದುಗ್ಧರಸ ನಾಳಗಳಲ್ಲಿ ಮತ್ತು ಗ್ರಂಥಿಗಳಲ್ಲಿ ಅಡಚಣೆಯಾಗಿ ಊತ ಉಂಟಾಗುತ್ತದೆ. ಅಲ್ಲದೆ ಸ್ಥಳೀಯ ಗ್ರಂಥಿಗಳಲ್ಲಿ ಅಡಚಣೆಯಾಗಿ ಊತ ಉಂಟಾಗುತ್ತದೆ. ಅಲ್ಲದೆ ಸ್ಥಳೀಯ ಗ್ರಂಥಿಗಳು ದೊಡ್ಡದಾಗುತ್ತವೆ. ಕೈಕಾಲುಗಳ ಮತ್ತು ವೃಷಣದ ಚೀಲದ ದುಗ್ಧರಸ ನಾಳಗಳಲ್ಲಿ ಸಾಮಾನ್ಯವಾಗಿ ಉರಿತ ಮತ್ತು ಅಡಚಣೆ ಉಂಟಾಗುತ್ತವೆ ಕೈ ಅಥವಾ ಕಾಲಿನ ಮುಖ್ಯವಾದ ದುಗ್ಧರಸ ನಾಳಗಳಲ್ಲಿ ಅಡಚಣೆ ಆದಾಗ ಕೈ ಅಥವಾ ಕಾಲು ಬರಬರುತ್ತ ದೊಡ್ಡದಾಗುತ್ತದೆ ಮತ್ತು ಅದರ ಚರ್ಮವೊ ಅಡಿಚರ್ಮವೊ ದಪ್ಪವಾಗಿ ಬಿರುಕು ಬಿಟ್ಟಂತಾಗುತ್ತದೆ. ಇದರಿಂದಾಗಿ ಕಾಲು ಆನೆಯ ಕಾಲನ್ನು ಹೋಲುತ್ತದೆ. ಈ ತರಹದ ಬದಲಾವಣೆಗಳು ಕಾಲು ಅಥವಾ ಕೈ ಇಲ್ಲವೇ ವೃಷಣಚೀಲಗಳಲ್ಲಿ ಅಥವಾ ಮೊಲೆ ಇಲ್ಲೆಲ್ಲ ಉಂಟಾಗಬಹುದು. ವೃಷಣಚೀಲ ಬಹಳ ದೊಡ್ಡದಾಗಿ 30 ಕೆಜಿಯಷ್ಟು ತೂಗಬಹುದು. ಹೊಟ್ಟೆಯ ದುಗ್ಧರಸ ನಾಳಗಳ ಅಡಚಣೆ ಆದಾಗ ಮೇದೋರಸ ಮೂತ್ರ ಮತ್ತು ಮೇದೋಯುಕ್ತಜಲೋವರ (ಕೈಲಸ್ ಅಸೈಟಿಸ್) ಉಂಟಾಗಬಹುದು. ಸೋಂಕು ಉಂಟಾದಗಿನಿಂದ ಆನೆಕಾಲು ಉಂಟಾಗುವುದಕ್ಕೆ ಸುಮಾರು ಹತ್ತು ವರ್ಷ ಬೇಕು. ಸೋಂಕು ಹತ್ತಿದ ಒಂದು ವರ್ಷದ ಮೇಲೆ ಮೈಕ್ರೊಫೈಲೀರಿಯಗಳು ಹೊರಮೈ ರಕ್ತದಲ್ಲಿ ಸಂಚರಿಸುತ್ತಿರುತ್ತವೆ. ರಕ್ತದ ಸವರನ್ನು ಪರೀಕ್ಷಿಸಿದಾಗ ಇವನ್ನು ಕಾಣಬಹುದು ನೀರ್ಡುಂಬಾವಿನ ದ್ರವವನ್ನು ಪರೀಕ್ಷಿಸಿದಾಗ ಮೈಕ್ರೋಫೈಲೇರಿಯಗಳನ್ನು ಕಾಣಬಹುದು. ಸುಣ್ಣಗಟ್ಟಿದ ಫೈಲೇರಿಯ ಕ್ರಿಮಿಗಳನ್ನು ಎಕ್ಸ್ ಕಿರಣ ಪರೀಕ್ಷೆಯಿಂದ ನೋಡಬಹುದು. ಕಾಂಪ್ಲಿಮೆಂಟ್ ಫಿಕ್ಸೇಷನ್ ಪರೀಕ್ಷೆಯಿಂದ ರೋಗವನ್ನು ಪತ್ತೆಹಚ್ಚಬಹುದು.

	ಲೋವಾಸಿಸ್ : ಲೋವಾಲೋವಾ ಎಂಬ ಫೈಲೇರಿಯದಿಂದ ಬರುವ ರೋಗ ಇದು ಆಫ್ರಿಕ ದೇಶದಲ್ಲಿ ಕಂಡುಬರುತ್ತದೆ. ಸೋಂಕು ಕ್ರೈಸಾಪ್ಸ್ ಎಂಬ ನೊಣದಿಂದ ಹರಡುತ್ತದೆ, ಇದರ ಪಕ್ವಾವಧಿ ಮೂರು ತಿಂಗಳಿಂದ ಒಂದು ವರ್ಷ. ಇದು ಅಡಿ ಚರ್ಮದಲ್ಲಿ ಒಗ್ಗದಿಕೆಯ ಉರಿತದ ಗಡ್ಡೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ಕಲಬಾರ್ ಗಡ್ಡೆ ಎಂದು ಹೆಸರು. ಸಾಮಾನ್ಯವಾಗಿ ಈ ಗಡ್ಡೆಗಳು ಕೈ ಅಥವಾ ಕಾಲುಗಳಲ್ಲಿರುತ್ತವೆ. ಗಾತ್ರ ಕೆಲವು ಸೆಂಮೀಗಲಷ್ಟು ಇರಬಹುದು. ಸಾಮಾನ್ಯವಾಗಿ ಕೆಲವು ದಿವಸಗಳಲ್ಲಿ ಇವು ಕಣ್ಮರೆಯಾಗುವುದಾದರು ಕೆಲವು ಸಲ ಎರಡು ಮೂರು ವಾರಗಳಿರುವುದುಂಟು. ಈ ತರಹದ ಒಂದಾದ ಮೇಲೊಂದು ಗಡ್ಡೆಗಳು ಆಗಾಗ್ಗೆ ಕಾಣಿಸಬಹುದು. ದದ್ದುಗಳುಂಟಾಗಬಹುದು. ಕೆಲವು ಸಲ ಹುಳು ಕಣ್ಣಿನ ಮುಂದಿನ ಕೋಣೆಯಲ್ಲಿ ಸಂಚರಿಸಬಹುದು. ಇದರಿಂದ ಕೆರಳಿಕೆ ಉಂಟಾಗಿ ಕಣ್ಗುಳಿಯ ಹಿಂದಿನ ಊತಕಗಳಲ್ಲಿ ಹುಳು ಸಂಚರಿಸುವಾಗ ತೀವ್ರವಾದ ಅರೆ ತಲೆ ನೋವು ಉಂಟಾಗಬಹುದು. ಅಪರೂಪವಾಗಿ ಎನ್‍ಕೆಫಲೈಟಿಸ್ ಕೂಡ ಬರಬಹುದು. 

	ಆಂಕೊಸರ್ಕಿಯಾಸಿಸ್ : ಅಂಕೋಸರ್ವಾವಾಲ್‍ವ್ಯುಲಸಿನಿಂದ ಬರುವ ರೋಗ ಆಫ್ರಿಕ, ದಕ್ಷಿಣ ಅರೇಬಿಯ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಕಂಡುಬರುತ್ತದೆ. ಸಿಮಿಲಿನಮ್ ಎಂಬ ನೊಣದಿಂದ ಹರಡುತ್ತದೆ. ಅಡಿಚರ್ಮದಲ್ಲಿ ಕುಕೋಶದ ಗಡ್ಡೆಗಳು ಉಂಟಾಗುತ್ತವೆ ಇವು ಸಾಮಾನ್ಯವಾಗಿ ಮೊಣಕೈ, ಮಂಡಿ ಎದೆ ಮತ್ತು ಚಪ್ಪೆಯ ಕೀಲುಗಳಲ್ಲಿರುತ್ತವೆ. ಅನೇಕ ತರಹದ ಚರ್ಮದ ಉರಿತ ಕಂಡುಬರುತ್ತದೆ. ಕಣ್ಣ ಜಾಲದ ಉರಿತ ಉಂಟಾಗಿ ಅಂಧತೆ ತಲೆದೋರಬಹುದು.

	ಡ್ರೇಕನಾಟಿಯಾಸಿಸ್ (ನಾರು ಹುಣ್ಣಿನ ರೋಗ, ಡ್ರಾಕನ್‍ಕ್ಲುಲೋಸಿಸ್) : ಡ್ರಾಕನ್‍ಕ್ಯುಲಸ್ ಪೆಡಿನೆನ್ಸಿನಿಂದ ಬರುವ ರೋಗ. ಆಫ್ರಿಕ, ಅರೇಬಿಯ ಜೋರ್ಡಾನ್, ಇರಾಕ್, ಇರಾನ್, ಆಪ್ಘಾನಿಸ್ತಾನ, ಇಂಡೋನೇಷಿಯ ಪಶ್ಚಿಮ ಮತ್ತು ಆಗ್ನೇಯ ಭಾರತದಲ್ಲಿ ಕಂಡುಬರುತ್ತದೆ. ಸ್ಯಕ್ಲಾಪ್ಸ್‍ವಂಶದ ಅನೇಕ ಪ್ರಭೇದಗಳ ಕೋಪ್‍ಪಾಡುಗಳು ಮಧ್ಯಸ್ಥ ಅತಿಥೇಯಗಳು. ಕುಡಿಯುವ ನೀರಿನ ಜೊತೆ ಈ ಚಿಪ್ಪಂಗಿಗಳನ್ನು ನುಂಗುವುದರಿಂದ ಮನುಷ್ಯನಿಗೆ ಸೋಂಕು ಹತ್ತುತ್ತದೆ. ಕ್ರಿಮಿ ಮನುಷ್ಯನ ಶರೀರದಲ್ಲಿ ವೃದ್ಧಿ ಹೊಂದಿ ಬಲಿತ ಹುಳುವಾಗುವುದಕ್ಕೆ ಸುಮಾರು ಒಂದು ತಿಂಗಳು ಬೇಕು. ಗಂಡು ಕ್ರಿಮಿಯ ಉದ್ದ 2.5 ಸೆಂಮೀ ಇದು ಬೇಗ ಸಾಯುತ್ತದೆ. ಹೆಣ್ಣುಕ್ರಿಮಿ 12-18 ತಿಂಗಲು ತನಕವೂ ಜೀವಿಸುತ್ತದೆ. ಬಸಿರಾದ ಹೆಣ್ಣುಕ್ರಿಮಿ ಚÀರ್ಮವನ್ನು ಭೇದಿಸಿಕೊಂಡು ಹೊರಬಂದಾಗ ಮರಿಗಳು ಹೊರಬೀಳುತ್ತವೆ. ಇವು ನೀರನ್ನು ತಲಪಿದಾಗ ಇವನ್ನು ಸೈಕಾಪ್ಸ್ (ನೀರಿನ ಚಿಗಟ) ಎಂಬ ಸಣ್ಣ ಸಂಧಿಪದಿಗಳು ನುಂಗುತ್ತವೆ. ಇಲ್ಲಿ ಮರಿಗಳು ವೃದ್ಧಿ ಹೊಂದಿ ಈ ಸೈಕ್ಲಾಫ್ಸುಗಳು ಸುಮಾರು 21 ದಿವಸಗಳಲ್ಲಿ ಸೋಂಕು ಉಂಟುಮಾಡಬಲ್ಲವು. ಸೋಂಕು ಹತ್ತಿದ ಸೈಕಾಪ್ಸುಗಳು ಬಾವಿ ಮತ್ತು ನುಂಗಿದಾಗ ಬಲಿತ ಮರಿಗಳು ಕರುಳನ್ನು ಸೇರಿ ಅದರ ಗೋಡೆಯನ್ನು ಭೇದಿಸಿಕೊಂಡು ಅತಿಥೇಯದ ಸಂಯೋಜಕ ಊತಕಗಳಲ್ಲಿ ಸಂಚರಿಸುತ್ತವೆ. 9-12 ತಿಂಗಳ ಮೇಲೆ ವೃದ್ಧಿಯಾದ ಬಲಿತ ಹೆಣ್ಣು ಕ್ರಿಮಿ ಚರ್ಮದ ಹೊರಮೈಯನ್ನು ತಲಪುತ್ತದೆ. ಅಲ್ಲಿ ಹೊಪ್ಪಳ ಉಂಟಾಗಿ ಅದು ಒಡೆದು ಹುಳುವಿನ ಮುಂತುದಿ ಹೊರಗೆ ಕಾಣಿಸುತ್ತದೆ. ಹೊಪ್ಪಳ ಒಡೆದು ಹುಣ್ಣಾಗಿ ಇದರಿಂದ ಮರಿಗಳು ಹೊರಬೀಳುತ್ತವೆ. ಇವು ನೀರನ್ನು ತಲಪಿ ಸೈಕ್ಲಾಪ್ಸಿನಿಂದ ನುಂಗಲ್ಪಡುತ್ತವೆ. ಮನುಷ್ಯನೇ ಇದರ ಮುಖ್ಯ ಅತಿಥೇಯ. ಚರ್ಮವನ್ನು ತಡವಿದಾಗ ಅದರ ಕೆಳಗಿರುವ ಹುಳು ಕೈಗೆ ಸಿಗಬಹುದು. ಹುಳುವಿನ ತಲೆ ಚರ್ಮದ ಹೊರಗೆ ಕಾಣಿಸಿಕೊಳ್ಳುವುದಕ್ಕೆ ಮುಂಚೆ ಚರ್ಮ ಕೆಂಪು ಛಾಯೆಗೆ ತಿರುಗುತ್ತದೆ ಮತ್ತು ಆ ಜಾಗವನ್ನು ಒತ್ತಿದಾಗ ನೋವು ಉಂಟಾಗುತ್ತದೆ. ಒಗ್ಗದಿಕೆಯ ಲಕ್ಷಣಗಳು ದದ್ದು, ಧರ್ಮ ಕೆಂಪಾಗುವುದು, ವಾಕರಿಕೆ, ವಾಂತಿ ಮತ್ತು ಭೇದಿ ಹೊಪ್ಪಳ ಒಡೆದು ಮರಿಗಳು ಹೊರಬೀಳುವುದಕ್ಕೆ ಶುರುವಾದಾಗ ಈ ಲಕ್ಷಣಗಳು ತಹಬಂದಿಗೆ ಬರುತ್ತವೆ. ಇದಕ್ಕೆ 3-4 ವಾರಗಳು ಬೇಕು. ಇದಾದ ತರುವಾಯ ಬಲಿತ ಹುಳು ಹೊರಬಿದ್ದು ರೋಗ ವಾಸಿಯಾಗುತ್ತದೆ. ಹೊಪ್ಪಳ ತಣ್ಣಗಿರುವ ಮತ್ತು ಒದ್ದೆಯಾದ ಭಾಗದಲ್ಲಿ ಸಾಮಾನ್ಯವಾಗಿ ಕಾಲಿನ ತಳಭಾಗದಲ್ಲಿ ಉಂಟಾಗುತ್ತದೆ. ಹುಳು ದೇಹದಲ್ಲಿದ್ದು ಸತ್ತಾಗ ಅಥವಾ ಕಡ್ಡಿಯಿಂದ ಸುತ್ತಿ ಹೊರತೆಗೆಯುತ್ತಿರುವಾಗ ಮಧ್ಯದಲ್ಲಿ ಅದು ತುಂಡಾದರೆ ಪ್ರತಿಕ್ರಿಯೆ ತೀವ್ರ. ಒಡೆದ ಹುಳು ಮನುಷ್ಯನ ಶರೀರದೊಳಗೆ ಹೆಚ್ಚಿನ ಪ್ರತಿಕ್ರಿಯೆ ಉಂಟಾಗುತ್ತದೆ. ಹುಳುವಿನ ತುಂಡಾದ ಭಾಗ ಮನುಷ್ಯನ ಶರೀರದೊಳಗೆ ಹೊಗುವಾಗ ಕೀವುಂಟುಮಾಡುವ ಏಕಾಣು ಜೀವಿಗಳು ಊತಕದೊಳಗೆ ವರ್ಗಾಯಿಸಲ್ಪಡುತ್ತವೆ. ಇದರಿಂದ ಕಣಜಾಲರಿತ ನಂಜುರಕ್ತ ಮತ್ತು ಕೀಲುರಿತ ಉಂಟಾಗಬಹುದು. ಸೆಟೆಬೇನೆ ಕೂಡ ಕಾಣಿಸಿಕೊಳ್ಳಬಹುದು. ಹೊಪ್ಪಳ ಮತ್ತು ಹೊಪ್ಪಳದಿಂದ ಹೊರಬೀಳುವ ಮರಿಗಳನ್ನು ಕಾಣುವುದರಿಂದ ರೋಗವನ್ನು ಪತ್ತೆ ಹಚ್ಚಬಹುದು.

	ರೋಗಕಾರಕ ಬಾಹ್ಯ ಪರೋಪಜೀವಿಗಳು ಮಾನವರಲ್ಲಿ ಬಲು ವಿರಳ ಕಜ್ಜಿ, ತುರಿ ಮುಂತಾದವನ್ನು ಉಂಟು ಮಾಡುವ ಕ್ರಿಮಿ ಮತ್ತು ತಲೆಹೇನು ಇವನ್ನು ಉದಾಹರಿಸಬಹುದು. ಸಾಮಾನ್ಯವಾಗಿ ದನ ಮತ್ತು ನಾಯಿಗಳನ್ನು ಅವಲಂಬಿಸಿರುವ ಹೊರ ಪರೋಪಜೀವಿಗಳಾದ ಉಣ್ಣೀಗಳು (ಟಿಕ್ಸ್) ಅಪರೂಪವಾಗಿ ಮಾನವರ ಮೈಮೇಲೆ ಕಚ್ಚಿಕೊಂಡಿರುವ ಪರೋಪಜೀವಿಗಳಾಗಿರಬಹುದು. ಇದೆ ರೀತಿ ಇಲಿ ಹೆಗ್ಗಣಗಳ ಬಾಹ್ಯ ಪರೋಪಜೀವಿಯಾದ ಚಿಗಟ (ಫ್ಲೀ) ಆದರೆ ಇದು ಮಾನವ ದೇಹದ ಮೇಲೆಯೇ ಕಚ್ಚಿಕೊಂಡಾಗಲಿ ಓಡಾಡಿಕೊಂಡಾಗಲಿ ಇರುವುದು ತೀರ ಅಪರೂಪ. ತಿಗಣೆ ಸೊಳ್ಳೆಗಳಂತೆ ಯಾವಾಗಲೋ ಬಂದು ಯಥಾಶಕ್ತಿ ಮಾನವನ ರಕ್ತವನ್ನು ಹೀರಿ ಹೊರಟು ಹೋಗುವುದೇ ಸಾಮಾನ್ಯ ಹೇನುಗಳು ತಲೆಯಲ್ಲಿ ಅಲ್ಲದೆ ಬಾಹ್ಯ ಜನನೇಂದ್ರಿಯಗಳ ನೆರೆಯಲ್ಲಿರುವ ರೋಮಗಳಲ್ಲೂ ಕೊಳಕು ಬಟ್ಟೆಗಳಲ್ಲೂ ಇರುವುದುಂಟು. ಕೂದಲು ರೋಮಗಳ ಹಾಗೂ ಬಟ್ಟೆಗಳ ಶುಚಿತ್ವಕ್ಕೆ ಗಮನ ಕೊಡದಿರುವವರಲ್ಲಿ ಹೇನುಗಳು ಸೇರುವುದು ಸಾಮಾನ್ಯ. ಇವು ಒಟ್ಟಾಗಿ ಒಂದೇ ಸ್ಥಳದಿಂದ ರಕ್ತಹೀರುವಾಗ ವ್ರಣಉಂಟಾಗಿ ಕೆರೆತ ನೋವುಗಳಿಂದ ಬಾಧೆಯೀಯಬಹುದು ಕಜ್ಜಿ ಮತ್ತು ತುರಿಯನ್ನು ಉಂಟುಮಾಡುವ ಕ್ರಿಮಿ ಸಾರ್ಕಾಪ್ಟಿಸ್ ಜಾತಿಗೆ ಸೇರಿದ ಸಂಧಿಪದಿ ಇದು ಬೆರಳುಗಳ ನಡುವೆ ಜಾಲ ಚರ್ಮದಲ್ಲಿ ಸಣ್ಣ ಡೊಗರು ಮಾಡಿಕೊಂಡು ವಾಸಿಸುತ್ತದೆ. ಅಲ್ಲಿ ವ್ರಣ ಉಂಟಾಗಬಹುದು. ಕೆರೆತದಿಂದ ಇವುಗಳ ಪರಿಣಾಮ ಮೈಮೇಲೆಲ್ಲ ಆಗಿ ಕಜ್ಜಿ ತುರಿಗಳು ಕಂಡುಬರುವುದು ಸಾಮಾನ್ಯ.
(ಜಿ.ಎಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ